ಶೀಘ್ರದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕ

23 sgr 10
Published on

ಸಾಗರ: ಶೀಘ್ರದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕ ಆಗಲಿದ್ದು ನೂತನ ಅಧ್ಯಕ್ಷರ ಆಯ್ಕೆ ನಂತರ ರಾಜ್ಯದಲ್ಲಿ ಪಕ್ಷ ಸಂಘಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಶ್ರೀಮಾರಿಕಾಂಬ ಜಾತ್ರೆ ಪ್ರಯುಕ್ತ ಭಾನುವಾರ ಶ್ರೀ ದೇವಿ ದರ್ಶನ ಪಡೆದು ಅನ್ನದಾಸೋಹದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಹೈಕಮಾಂಡ್ ಯಾರನ್ನೂ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದರೂ ಅವರ ಸೂಚನೆಯಂತೆ ಪಕ್ಷ ಸಂಘಟನೆಗೆ ತೊಡಗಿಕೊಳ್ಳಲಾಗುವುದು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗೆ ಪಕ್ಷವನ್ನು ಸಾಗರ ಮತ್ತು ಹೊಸನಗರ ವ್ಯಾಪ್ತಿಯಲ್ಲಿ ಸದೃಢಗೊಳಿಸಲಾಗುತ್ತದೆ. ನಮ್ಮ ಹಿರಿಯರು ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ನಾನು ಸಹ ಕೆಲವು ಭಾಗಗಳಲ್ಲಿ ಸಂಚರಿಸಿ, ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬಗ್ಗೆ ಹಿರಿಯರ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಮೂರು ವರ್ಷಕ್ಕೊಮ್ಮೆ ನಡೆಯುವ ಇತಿಹಾಸ ಪ್ರಸಿದ್ದ ಶ್ರೀಮಾರಿಕಾಂಬಾ ಜಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಜಾತ್ರೆ ಕಳೆದ ಆರು ದಿನಗಳಿಂದ ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಯುತ್ತಿದೆ. ವ್ಯವಸ್ಥಾಪಕ ಸಮಿತಿ ಮತ್ತು ಸ್ವಯಂ ಸೇವಕರು ಉತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದರು.

ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಪ್ರಮುಖರಾದ ಕಿರಣ್ ದೊಡ್ಮನೆ, ಲಿಂಗರಾಜ್ ಆರೋಡಿ, ಬೀರೇಶ್ ಕಾಗೋಡು, ಸೋಮಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net