

ಅಥಣಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನ ನಮ್ಮೆಲ್ಲರಿಗೂ ಆದರ್ಶವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಶುಕ್ರವಾರ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶೀಘ್ರದಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಮುಖ್ಯಮಂತ್ರಿ ಭೂಮಿಪೂಜೆ ನೆರವೇರಿಸಲಿದ್ದಾರೆ. ೧೫೦೦ ಕೋಟಿ ರೂ. ವೆಚ್ಚದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಜನವರಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದರು.
ತಹಸೀಲ್ದಾರ್ ಸಿದರಾಯ ಭೋಸಗಿ ಮಾತನಾಡಿ, ಇಂದು ದೇಶದ ಮಹಾನ್ ಹೋರಾಟಗಾರರನ್ನು ಸ್ಮರಿಸುವ ಸುದಿನವಾಗಿದೆ ಎಂದರು. ಉತ್ತಮ ಪ್ರದರ್ಶನ ನೀಡಿದ ಸಾಂಸ್ಕೃತಿಕ ಕಲಾ ತಂಡಗಳಿಗೆ ನಗದು ಬಹುಮಾನ ನೀಡಲಾಯಿತು. ಅನೇಕ ಸಾಧಕರನ್ನು ಸತ್ಕರಿಸಿ ನಂತರ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು.
ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ತಾಪಂ ಆಡಳಿತಾಧಿಕಾರಿ ಬಸವರಾಜ ಹೆಗ್ಗನಾಯಕ, ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ, ಬಿಇಒ ಎಂ.ಆರ್. ಮುಂಜೆ, ಅಧಿಕಾರಿಗಳಾದ ಶಿವಾನಂದ ಕಲ್ಲಾಪುರ, ಅಶೊಕ ಗುಡಿಮನಿ, ಸಂತೋಷ ಹಳ್ಳೂರ ಸೇರಿ ಪುರಸಭೆ ಸದಸ್ಯರು, ಗಣ್ಯರು, ವಿದ್ಯಾರ್ಥಿಗಳು ಇತರರಿದ್ದರು.