

ಹಾಸನ: ಹೇಮಾವತಿ ನದಿಗೆ ಬಾಗಿನ ಅರ್ಪಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಯ ಕೇಳಿದ್ದೀನಿ. ಅವರು ಸಮಯ ಕೊಟ್ಟ ಕೂಡಲೇ ಬಾಗಿನ ಅರ್ಪಿಸುವ ಕಾರ್ಯಕ್ರಮ ನಿಗದಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹವಾಮಾನ ಸರಿಯಲ್ಲ ಹೆಲಿಕಾಪ್ಟರ್‌ನಲ್ಲಿ ಓಡಾಡಲ್ಲ ಎಂದು ಸಿಎಂ ಹೇಳಿದ್ದಾರೆ. ಇವತ್ತು ಕೇಸ್ ಇದೆಯಲ್ಲ ಸಿಎಂ ಅವರು ಟೆನ್ಷನ್‌ನಲ್ಲಿ ಇರ್ತಾರೆ. ಸಂಜೆ ಭೇಟಿ ಮಾಡಿ ದಿನಾಂಕ ನಿಗದಿ ಮಾಡುವೆ ಎಂದರು
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ ರಚನೆ ಬಗ್ಗೆ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ಅವರ ತೀರ್ಮಾನ ಎಲ್ಲಾರು ಬದ್ದರಾಗಿರುತ್ತಾವೆ ಎಂದು ಹೇಳಿದರು.
ಮುಂಬಡ್ತಿ ಸಿಗುತ್ತದೆ ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಅವರ ಹೇಳಿಕೆಗೆ ಅದರ ಬಗ್ಗೆ ಅವರನ್ನೇ ಕೇಳಬೇಕು. ಕಾಂಗ್ರೆಸ್ ಪಕ್ಷ ಎಂದರೆ ಹೈಕಮಾಂಡ್‌ನಿಂದ ನಿರ್ದೇಶನಗೊಳ್ಳುವ ಪಕ್ಷ. ರಾಹುಲ್‌ಗಾಂಧಿ ಅವರು ಅವರಿಗೆ ಬಡ್ತಿ ಕೊಡ್ತೀನಿ ಅಂದರೆ ನಾವು ತಪ್ಪಿಸಲು ಆಗುತ್ತಾ, ಬಡ್ತಿ ಇರಬಹುದು, ಯಾವುದೇ ಇರಬಹುದು ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳಿದರು.
ಮುಡಾ ಹಗರಣ ಕುರಿತು ಇಂದು ಸಿಎಂ ಸಿದ್ದರಾಮಯ್ಯ ಅವರ ಕುರಿತು ಗುರುವಾರ ತೀರ್ಪು ಹೊರ ಬೀಳುವ ಕುರಿತು ಪ್ರತಿಕ್ರಿಯಿಸಿದ ಅವರು, ನಾನೂ ಹತ್ತು ವರ್ಷ ಪ್ರಾಕ್ಟೀಸ್ ಮಾಡಿದ್ದೀನಿ. ಅರ್ಜಿದಾರರು ಸಿದ್ದರಾಮಯ್ಯ, ಅವರ ಪರ ವಕೀಲರು ಸಿಂಘ್ವಿ, ಅವರು ವಾದ ಮಂಡಿಸಿದ್ದಾರೆ. ಅರ್ಜಿದಾರರ ಪರ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ಇಂದೇ ತೀರ್ಪು ಬರಲ್ಲ, ಇನ್ನೂ ಸಮಯ ತೆಗೆದುಕೊಳ್ಳುತ್ತೆ ಎಂಬ ಊಹೆ ನನ್ನದು ಎಂದು ಸಚಿವರು ಹೇಳಿದರು.
ಮಾಧ್ಯಮಗಳ ಮೇಲೆ ಸಚಿವ ಗರಂ:
ದರ್ಶನ್ ಪ್ರಕರಣದ ಬಗ್ಗೆ ಕೇಳಿದ್ದಕ್ಕೆ ಗರಂ ಆದ ಸಚಿವ ಕೆ.ಎನ್.ರಾಜಣ್ಣ, ದೇಶದಲ್ಲಿ ದರ್ಶನ್ ಒಬ್ಬರೇ ಇರೋದಾ, ಅವರನ್ನು ಬಿಟ್ಟರೆ ಬೇರೆ ಯಾರೂ ಇಲ್ವಾ, ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಅವರದ್ದನ್ನೇ ತೋರಿಸುತ್ತೀರಾ, ಅದಕ್ಕಿಂತ ಒಳ್ಳೆಯದನ್ನು ತೋರಿಸಿ ಎಂದು ಸಿಟ್ಟಾದರು.
ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲಾ ಎಂದು ಪ್ರಶ್ನಿಸಿದ ಸಚಿವರು,ಬರೀ ಅವನದ್ದೇ ತೋರಿಸುತ್ತೀರಲ್ಲಾ, ಟಿವಿಯವರಿಗೆ ಬೇರೆ ಕೆಲಸ ಇಲ್ವಾ, ಒಳ್ಳೆಯ ಕಲಾವಿದ ಆದರೆ ನಾವೆಲ್ಲರೂ ಒಪ್ಪುತ್ತೇವೆ. ಒಳ್ಳೆಯ ಕಲಾವಿದ ಆದರೆ ಜನರೂ ಇಷ್ಟ ಪಡ್ತಾರೆ. ಅದನ್ನು ಬಿಟ್ಟು ಮಾಡಬಾರದ್ದನ್ನ ಮಾಡಿದ್ರೆ ಕಾನೂನು ಕ್ರಮ ಆಗಲಿದೆ. ಅದನ್ನು ಬಿಟ್ಟು ಬೆಳಿಗ್ಗೆ, ಸಾಯಂಕಾಲ ಬರೀ ದರ್ಶನ್ ಸುದ್ದಿಯನ್ನೇ ತೋರಿಸುತ್ತಾ ಇದ್ದರೆ ನೋಡಲು ಅಸಹ್ಯ ಆಗುತ್ತೆ ಎಂದರು.