

ಸೊರಬ/ಆನವಟ್ಟಿ: ತಾಲೂಕಿನಲ್ಲಿ ನಡೆದ ಸರ್ಕಾರಿ ಕಾಮಗಾರಿಗಳ ಭ್ರಷ್ಟಾಚಾರ, ಅವ್ಯವಹಾರ, ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಶಾಸಕ ಕುಮಾರ್ ಬಂಗಾರಪ್ಪ ಅವರ ವಿರುದ್ಧ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಂದ ಹಿಡಿದು ಬಿಜೆಪಿ ವರಿಷ್ಠರಿಗೆ ಹಾಗೂ ಸರ್ಕಾರಕ್ಕ್ಕೂ ಪಟ್ಟಿ ಸಲ್ಲಿಸುತ್ತೇವೆ. ಜತೆಗೆ ಸದ್ಯದಲ್ಲೇ ತಾಲೂಕಿನಲ್ಲಿ ಬಿಜೆಪಿ ಬಚಾವೋ ಸಮಾವೇಶ ಹಮ್ಮಿಕೊಳ್ಳುತ್ತೇವೆ ಹಾಗೂ ಮುಂದಿನ ಚುಣಾವಣೆಯಲ್ಲಿ ನಮೋ ವೇದಿಕೆಯ ಅಭ್ಯರ್ಥಿ ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ನಮೋ ವೇದಿಕೆಯ ಸದಸ್ಯರು ಒಕ್ಕೊರಲಿನಿಂದ ಘೋಷಣೆ ಮಾಡಿದರು.
ಶುಕ್ರವಾರ ಆನವಟ್ಟಿಯಲ್ಲಿ ನಮೋ ವೇದಿಕೆ ಹಮ್ಮಿಕೊಂಡಿದ್ದ ಕುಮಾರ್ ಬಂಗಾರಪ್ಪ ಹಠಾವೋ, ಬಿಜೆಪಿ ಬಚಾವೋ ಕಾರ್ಯಕ್ರಮದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಹಾಗೂ ನಮೋ ವೇದಿಕೆಯ ಅಧ್ಯಕ್ಷ ಪಾಣಿ ರಾಜಪ್ಪ, ಬಿಜೆಪಿಯಿಂದ ಮರು ರಾಜಕೀಯ ಹುಟ್ಟು ಪಡೆದು, ಪಕ್ಷದ ತತ್ವ, ಸಿದ್ಧಾಂತಗಳನ್ನು ಗಾಳಿಗೆ ತೂರಿ, ದುರಹಂಕಾರದ ಜತೆಗೆ ಭ್ರಷ್ಟಾಚಾರದಲ್ಲಿ ತೊಡಗಿ, ಬಿಜೆಪಿಯನ್ನು ಹಾಳು ಮಾಡುತ್ತಿರುವ ಶಾಸಕ ಕುಮಾರ್ ಬಂಗಾರಪ್ಪ ಅವರಿಂದ ಪಕ್ಷವನ್ನು ರಕ್ಷಣೆ ಮಾಡುವುದೇ ನಮೋ ವೇದಿಕೆಯ ಗುರಿಯಾಗಿದೆ ಎಂದು ಹೇಳಿದರು.
ಕುಮಾರ್ ಬಂಗಾರಪ್ಪ ಅವರಿಂದ ತಾಲೂಕಿನ ಅಭಿವೃದ್ಧಿ ಆಗುವುದಿಲ್ಲ, ಬಿಜೆಪಿಯ ವರ್ಚಸ್ಸೂ ಉಳಿಯುವುದಿಲ್ಲ. ಮತ್ತೆ ಅವರಿಗೆ ಪಕ್ಷದಿಂದ ಟಿಕೆಟ್ ನೀಡದಂತೆ ವರಿಷ್ಠರ ಮನವೊಲಿಸಲಾಗುವುದು. ತಾಲೂಕಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ಅವರ ಕೊಡುಗೆಯನ್ನು ನನ್ನ ಸಾಧನೆ ಎಂದು ಬಿಂಬಿಸಿಕೊಳ್ಳುವ ಶಾಸಕರು, ರಾಘವೇಂದ್ರ ಅವರ ಪರಿಶ್ರಮದಿಂದ ಜಯ ಗಳಿಸಿ ಮೂಗೂರು ನೀರಾವರಿ ಯೋಜನೆಯ ಉದ್ಘಾಟನೆಗೆ ಅವರನ್ನೇ ಕಾಯಿಸಿದ ವ್ಯಕ್ತಿ. ಜನಸಮಾನ್ಯರನ್ನು ಬಿಟ್ಟಾರೇ ಎಂದು ಪ್ರಶ್ನಿಸಿದರು.