ಶೀಘ್ರ ಪುನರ್ವಸತಿ ಕಲ್ಪಿಸುವಂತೆ ಗ್ರಾಮಸ್ಥರ ಮನವಿ

Dc Shilpa nag
ಹನೂರು ತಾಲೂಕಿನ ಚಂಗಡಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪನಾಗ್ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ತಹಸೀಲ್ದಾರ್ ಗುರುಪ್ರಸಾದ್, ಮಂಜುನಾಥ್, ಡಿಸಿಎಫ್ ಸಂತೋಷ್‌ಕುಮಾರ್, ವಿದ್ಯಾಯಿನಿ, ಚೇತನ್, ವಿನೋದ್ ಇತರರು ಇದ್ದರು.
Published on

ಹನೂರು : ಗ್ರಾಮ ಸ್ಥಳಾಂತರ ಸಂಬಂಧ ಶೀಘ್ರ ಪುನರ್ವಸತಿ ಕಲ್ಪಿಸುವಂತೆ ತಾಲೂಕಿನ ಕಾಡಂಚಿನ ಚಂಗಡಿ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರಿಗೆ ಮನವಿ ಮಾಡಿದರು.

ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಅವರೊಂದಿಗೆ ಗ್ರಾಮಸ್ಥರು ಮಾತನಾಡಿ, ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟಾರಣ್ಯದಲ್ಲಿರುವ ಗ್ರಾಮದಲ್ಲಿ ಸುಮಾರು 240ಕ್ಕೂ ಹೆಚ್ಚು ಕುಟುಂಬಗಳು ಹಲವು ದಶಕಗಳಿಂದ ವಾಸಿಸುತ್ತಿದ್ದು, ಕೃಷಿ ಹಾಗೂ ಕೂಲಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ, ಕುಡಿಯುವ ನೀರು, ಸಮರ್ಪಕ ರಸ್ತೆ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯದಿಂದ ವಂಚಿತರಾಗಿದ್ದೇವೆ. ಕಾಡು ಪ್ರಾಣಿಗಳ ಹಾವಳಿಯಿಂದ ತತ್ತರಿಸಿ ಹೋಗಿದ್ದೇವೆ. ಇದನ್ನು ಮನಗಂಡು ಸರ್ಕಾರ 3 ವರ್ಷದ ಹಿಂದೆ ಪುನರ್ವಸತಿ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದ್ದು, ಜಿಲ್ಲಾಡಳಿತದಿಂದ ಸ್ಥಳವನ್ನು ಸಹ ಗುರುತಿಸಲಾಗಿದೆ. ಆದರೆ, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ನಮಗೆ ಆದಷ್ಟು ಬೇಗ ನಿವೇಶನ, ಮನೆ, ಜಮೀನು ಸೇರಿದಂತೆ ಘೋಷಿಸಿದ್ದ ಇನ್ನಿತರೆ ಸವಲತ್ತುಗಳನ್ನು ಒದಗಿಸಿ ಕೊಡಬೇಕು. ಇಲ್ಲವೇ ಗುರುತಿಸಿರುವ ಸ್ಥಳದಲ್ಲಿ ಗುಡಿಸಲು ಹಾಕಿ ಜೀವನ ಸಾಗಿಸಲು ಅವಕಾಶವಾದರೂ ನೀಡಬೇಕೆಂದು ಮನವಿ ಮಾಡಿದರು.

ಮನವಿ ಆಲಿಸಿದ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಮಾತನಾಡಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಬುಧವಾರ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸಮಸ್ಯೆ ಆಲಿಸುತ್ತಿದ್ದ ವೇಳೆ ಗ್ರಾಮದ ಮಹಿಳೆಯರಾದ ದೇವಮ್ಮ, ಜಯಮ್ಮ, ಕೆಂಪಮ್ಮ, ಮುತ್ತಮ್ಮ, ಸಿದ್ದಮ್ಮ, ಕಾಳಮ್ಮ ಹಾಗೂ ನೆರೆದಿದ್ದ ಇನ್ನಿತರೆ ಮಹಿಳೆಯರು ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರನ್ನು ನಮಗೆ ಇಲ್ಲಿ ಯಾವುದೇ ಸೌಕರ್ಯಗಳು ಸಿಗುತ್ತಿಲ್ಲ. ನಮ್ಮ ಮಕ್ಕಳು ಕೂಲಿಗಾಗಿ ಇತರೆಡೆಗೆ ತೆರಳಿದ್ದಾರೆ. ಇಲ್ಲಿರಲು ನಮಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಗ್ರಾಮದಿಂದ ಬಿಡುಗಡೆ ಮಾಡಿಕೊಡು ತಾಯಿ ಎಂದು ಪರಿಪರಿಯಾಗಿ ಬೇಡಿಕೊಂಡರು.

ಇದೇ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಗುರುಪ್ರಸಾದ್, ಪ್ರೊಬೇಷನರಿ ತಹಸೀಲ್ದಾರ್ ಮಂಜುನಾಥ್, ಡಿಸಿಎಫ್ ಸಂತೋಷ್‌ಕುಮಾರ್, ಎಸಿಎಫ್ ಬಸವರಾಜು, ಆರ್‌ಎಫ್‌ಒ ಭಾರತೀ ನಂದಿಹಳ್ಳಿ, ಭೂ ದಾಖಲೆಗಳ ನಿರ್ದೇಶಕಿ ವಿದ್ಯಾಯಿನಿ, ಉಪ ನಿರ್ದೇಶಕ ಚೇತನ್, ತಾಲೂಕು ಸರ್ವೇಯರ್ ಕುಮಾರಸ್ವಾಮಿ, ಗ್ರಾಮಲೆಕ್ಕಿಗರಾದ ವಿನೋದ್, ಕಾರ್ತಿಕ್, ಹಸಿರು ಸೇನೆ ಮತ್ತು ರೈತ ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ಮುಖಂಡರಾದ ದೊಡ್ಡೇಗೌಡ, ಶಾಂತಕುಮಾರ್, ಶಿವಣ್ಣ, ಮುನಿನಂಜೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net