

ಗದಗ: ಜಿಲ್ಲೆಯ ಪ್ರವಾಹಪೀಡಿತ ನೆರೆ ಸಂತ್ರಸ್ತ ಕುಟುಂಬಗಳ ಪುನರ್ವಸತಿ ಹಾಗೂ ಮೂಲ ಸೌಕರ್ಯಗಳ ಪುನರ್ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಜಕುಮಾರ್ ಖತ್ರಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಯೋಜನೆ ಹಾಗೂ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಬರ ಪರಿಸ್ಥಿತಿ ಸಾಮಾನ್ಯವಾಗುತ್ತಿದ್ದು, ಜಿಲ್ಲೆಯಲ್ಲಿನ ಅಂತರ್ಜಲ ಸಂರಕ್ಷಣೆ, ಮಳೆ ನೀರು ಸಂಗ್ರಹ ಹಾಗೂ ಪರಿಸ್ಥಿತಿಗನುಗುಣವಾದ ಬೆಳೆ ಬೆಳೆಯುವಂತೆ ಸಂಬಂಧಿತ ಇಲಾಖೆಗಳು ಅಗತ್ಯ ಕ್ರಮ ಕೈಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯ ನೆರೆ ಸಂತ್ರಸ್ತರ ಪುನರ್ವಸತಿ, ಮೂಲ ಸೌಕರ್ಯಗಳ ಪುನರ್ ನಿರ್ವಣ, ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು, ಮೇವು ಪೂರೈಕೆ ಕುರಿತು ಮಾಹಿತಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವರದಿ ನೀಡಲು ಸೂಚಿಸಿದರು.
ಜಿಲ್ಲೆಯಲ್ಲಿ 1.77 ಲಕ್ಷ ಮೆ.ಟನ್ ಮೇವು ಸಂಗ್ರಹವಿದ್ದು, 21 ವಾರ ಕಾಲ ಯಾವುದೇ ತೊಂದರೆ ಇಲ್ಲ. ಜಿಲ್ಲೆಯಲ್ಲಿನ 1.89 ಲಕ್ಷ ಜಾನುವಾರುಗಳಿಗೆ ಕಾಲು ಬೇನೆ ಲಸಿಕೆ ಹಾಕಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ. ಚನ್ನಕೇಶವ ತಿಳಿಸಿದರು.
ಜಿಲ್ಲೆಯಲ್ಲಿ 1.02 ಲಕ್ಷ ಆಯುಷ್ಮಾನ್ ಆರೋಗ್ಯ ಕಾರ್ಡ್ದಾರರಿದ್ದು, ಈವರೆಗೆ 5820 ಫಲಾನುಭವಿಗಳ ಪೈಕಿ 4,732 ಫಲಾನುಭವಿಗಳಿಗೆ 1.53 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ ನೀಡುವಲ್ಲಿ ವಿಳಂಬವಾಗುತ್ತಿದ್ದು, ನಿಗದಿತ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ತಲುಪುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದರು.
ಜಿಲ್ಲೆಯಲ್ಲಿ 13,536 ವಿದ್ಯಾರ್ಥಿಗಳು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಬರೆಯುವುದಕ್ಕೆ ಅರ್ಹತೆ ಪಡೆದಿದ್ದು, ಉತ್ತಮ ಫಲಿತಾಂಶಕ್ಕಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಬಾರಾಟಕ್ಕೆ ಹೇಳಿದರು.
ನರೇಗಾ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯು 78 ಕಾಮಗಾರಿ ಕೈಗೆತ್ತಿಕೊಂಡಿದ್ದು ಆ ಪೈಕಿ 6.67 ಕೋಟಿ ರೂ. ವೆಚ್ಚದಲ್ಲಿ 66 ಕಾಮಗಾರಿ ಪೂರ್ಣಗೊಳಿಸಲಾಗಿದೆ. 12 ಕಾಮಗಾರಿ ಪ್ರಗತಿಯಲ್ಲಿವೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಜಿಪ ಸಿಇಒ ಡಾ. ಆನಂದ ಕೆ., ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಮತ್ತಿತರರು ಇದ್ದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಮಾತನಾಡಿ, ಜಿಲ್ಲೆಯ ಹಿಂಗಾರು ಹಂಗಾಮಿನಲ್ಲಿ 2.69 ಲಕ್ಷ ಹೆಕ್ಟೇರ್ ಪೈಕಿ 2.50 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಕಡಲೆ ಹಾಗೂ ಶೇಂಗಾ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2019ರ ಮುಂಗಾರು ಹಂಗಾಮಿನಲ್ಲಿ 72,071 ಹಾಗೂ ಹಿಂಗಾರು ಹಂಗಾಮಿನಲ್ಲಿ 1.32 ಲಕ್ಷ ರೈತರು ನೋಂದಾಯಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ 1,17,990 ರೈತ ಕುಟುಂಬಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಣಕಾಸು ಸೌಲಭ್ಯ ಪಡೆಯುತ್ತಿವೆ. ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಗಾಗಿ ಪೂರ್ವ ಮುಂಗಾರಿಗಾಗಿ 330 ಗ್ರಾಮಗಳ ಪೈಕಿ 260 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಅನುದಾನ ಬಿಡುಗಡೆ ಮಾಡಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 1,166 ಅಂಗನವಾಡಿಗಳಿಗೆ ಹೊಸದಾಗಿ 32 ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇಲಾಖೆಯ ಯೋಜನೆಗಳ ಜಾರಿಗೆ ಅಗತ್ಯದ ಅನುದಾನ ಬಿಡುಗಡೆ ಮಾಡಬೇಕೆಂದು ಉಪನಿರ್ದೇಶಕಿ ಡಾ.ಎಚ್.ಎಚ್. ಕುಕನೂರ ಒತ್ತಾಯಿಸಿದರು.