

ವಿಜಯಪುರ: ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹಣ ಮಂಜೂರಾಗಿದ್ದು, ಎಲ್ಲ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿದ ಅವರು, ನಗರದಲ್ಲಿ ಸಾಕಷ್ಟು ಪುರಾತನ ಭಾವಿಗಳನ್ನು ಸ್ವಚ್ಛ ಗೊಳಿಸಲಾಗುತ್ತಿದೆ. ಅವುಗಳನ್ನ ರಕ್ಷಣೆ ಮಾಡುವುದು ಅನಿವಾರ್ಯವಾಗಿದೆ. ಸ್ವಚ್ಛಗೊಳಿಸಿದ ಬಾವಿಗಳಿಗೆ ಮೋಟರ್ ಮೂಲಕ ನಗರದ ಉದ್ಯಾನಗಳಿಗೆ ನೀರೊದಿಗಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು.
ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದಂತೆಯೇ ಮುಂದಿನ ದಿನಗಳಲ್ಲಿ ತೊರವಿ ತಾಂಡಾದಲ್ಲಿ ಮನೆ ಮನೆಗೂ ನೀರಿನ ಸಂಪರ್ಕ ವ್ಯವಸ್ಥೆ ಮಾಡಿಕೊಡಲಾಗುವುದು. ಸಣ್ಣ ನೀರಾವರಿ ಇಲಾಖೆಯಿಂದ ಬಾಂದಾರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಬಾಂದಾರ, ಚೆಕ್‌ಡ್ಯಾಂ, ನಾಲಾಬಂದ್ ಮಾಡುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದಲ್ಲದೆ ರೈತರ ಕೃಷಿ ಭೂಮಿಯ ಬೋರ್‌ವೆಲ್‌ಗಳಿಗೆ ಮರು ಜೀವ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಲೋಕೋಪಯೋಗಿ ಇಲಾಖೆಯಿಂದ ಮಂಜೂರಿಸಿದ ಒಟ್ಟು 2 ಕೋಟಿ ರೂ. ಮೊತ್ತದ ನಗರದ ಸೋಲಾಪುರ ರಸ್ತೆಯ ಎನ್.ಸಿ.ಸಿ ಕಚೇರಿಯಿಂದ ಅಡವಿಶಂಕರಲಿಂಗ ದೇವಸ್ಥಾನದ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ನಂತರ ತೊರವಿ ಎಲ್.ಟಿ ನಂ 2ರ ಹತ್ತಿರ ಹಳ್ಳಕ್ಕೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಮಂಜೂರಿಸಿದ ಒಟ್ಟು 50 ಲಕ್ಷ ರೂ. ಮೊತ್ತದ ಬಾಂದಾರ ನಿರ್ಮಾಣ, ಕೆಬಿಜೆಎನ್‌ಎಲ್ ನಿಂದ ಮಂಜೂರಿಸಿದ ಒಟ್ಟು 85.41 ಲಕ್ಷ ರೂ. ಮೊತ್ತದಲ್ಲಿ ತೊರವಿ ಎಲ್.ಟಿ ನಂ 1, ಎಲ್.ಟಿ ನಂ 2ರಲ್ಲಿ ನೀರಿನ ಟ್ಯಾಂಕರ್ ನಿರ್ಮಾಣ ಮತ್ತು ಪೈಪ್‌ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯ ಲಕ್ಷ್ಮಣ ಜಾಧವ, ಬಿಜೆಪಿ ಮುಖಂಡರಾದ ಗುರು ಗಚ್ಚಿನಮಠ, ದಾದಾಸಾಹೇಬ ಬಾಗಾಯತ್, ಪ್ರಕಾಶ ರಾಠೋಡ, ಮಡಿವಾಳ ಯಳವಾರ, ಚಂದ್ರು ಚೌಧರಿ, ಶಶಿ ಅಥರ್ಗಾ, ರಾಜು ಹಿಪ್ಪರಗಿ, ಪ್ರಕಾಶ ಚವಾಣ್, ದತ್ತಾ ಗೊಲಾಂಡೆ, ಬಸವರಾಜ ಗೊಳಸಂಗಿ, ಬಾಳು ಚವಾಣ್, ಶರಣು ಕಾಖಂಡಕಿ, ರಾಜಶೇಖರ ಭಜಂತ್ರಿ, ಛಾಯಾ ಮಾಶಿಯವರ, ಪುಷ್ಪಾ ಮಹಾಂತಮಠ, ಸುವರ್ಣಾ ಕುರ್ಲೆ ಇತರರು ಉಪಸ್ಥಿತರಿದ್ದರು.