ಶೀಘ್ರ ಅಕ್ಕಾ ಕೆಫೆ,ಸಂಜೀವಿನಿ ಸೂಪರ್‌ಮಾರ್ಕೆಟ್ ಸ್ಥಾಪನೆ

20240301_124842--10
Published on

ಚಿತ್ರದುರ್ಗ: ದೊಡ್ಡ ಉದ್ದಿಮೆಗಳನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಉತ್ಪನ್ನಗಳ ಬ್ರ್ಯಾಂಡಿಂಗ್,ಹಣಕಾಸು ಹಾಗೂ ಮಾರುಕಟ್ಟೆ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಶಾಸಕ ವೀರೇಂದ್ರಪಪ್ಪಿ ಅವರು ಸಲಹೆ ನೀಡಿದರು.
ಜಿಪಂ,ಕೌಶಲಾಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂ ಜೀವಿನಿಯಿಂದ ನಗರದ ವಾಸವಿಮಹಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಎರಡು ದಿನಗಳ ಜಿಲ್ಲಾಮಟ್ಟದ ಸರಸ್ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಗುಣಮಟ್ಟ,ಲೋಗೋ,ಪ್ರಚಾರ,ಆಕರ್ಷಕ ಹೆಸರು ಮತ್ತು ಪ್ಯಾಕಿಂಗ್‌ಗಳೊಂದಿಗೆ ಉತ್ಪನ್ನಗಳ ಮಾರಾಟ ಮಾಡಬೇಕು. ಎಲ್ಲ ಅಂತಾ ರಾಷ್ಟ್ರೀಯ ಉತ್ಪನ್ನಗಳು ಸಣ್ಣ ಪ್ರಮಾಣದಲ್ಲಿ ಸ್ಥಳೀಯವಾಗಿ ಆರಂಭವಾಗಿ ಬೃಹದಾಕಾರವಾಗಿ ಬೆಳದಿವೆ. ಹಣಕಾಸು ನಿರ್ವಹಣೆ ಹಾಗೂ ಮಾರುಕಟ್ಟೆ ವಿಸ್ತರಣೆಗೆಂದೇ ಪ್ರತ್ಯೇಕ ಸದಸ್ಯರು ಇರಬೇಕು. ಲಾಭವನ್ನು ಉದ್ದಿಮೆ ಬಲವರ್ಧನೆಗೆ ಬಳಸ ಬೇಕು,ಆನ್‌ಲೈನ್ ಮಾರಾಟದ ಕಡೆಯೂ ಗಮನ ಹರಿಸಬೇಕೆಂದರು. ರಾಜ್ಯಸರ್ಕಾರ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಅಕ್ಕಾಕೆಫೆ, ಸಂಜೀವಿನಿ ಸೂಪರ್ ಮಾರ್ಕಟ್‌ಗಳನ್ನು ಪ್ರಾರಂಭಿಸಲಿದೆ ಎಂದರು.
ಜಿ.ಪಂ.ಸಿಇಒ ಎಸ್.ಜೆ.ಸೋಮಶೇಖರ್ ಅವರು ಮಾತನಾಡಿ,ಶಾಸಕರ ಸಲಹೆಯಂತೆ ಮಹಿಳಾ ಸ್ವ ಸಹಾಯ ಉತ್ಪಾದಕ ಸಂಘಗಳ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೃಜಿಸಲು ಪ್ರಯತ್ನಿಸಲಾಗುವುದು. ಅಗತ್ಯ ನೆರವನ್ನು ಜಿಪಂದಿಂದ ಒದಗಿಸಲಾಗುವುದು ಎಂದರು. ಜಿಪಂ ಯೋಜನಾ ನಿರ್ದೇಶಕಿ ಆರ್.ಬಿ.ನಂದಿನಿ ಇದ್ದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ 30 ಕ್ಕೂ ಹೆಚ್ಚು ಮಹಿಳಾ ಸ್ವ ಸಹಾಯ ಉತ್ಪಾದಕ ಸಂಘಗಳು ಮೇಳದಲ್ಲಿ ಪಾಲ್ಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net