

ಉಗರಗೋಳ: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಶೀಗಿ ಹುಣ್ಣಿಮೆ ಅಂಗವಾಗಿ ಗುರುವಾರ ಜಾತ್ರೆಗೆ ಭಕ್ತಸಾಗರ ಹರಿದುಬಂದಿತ್ತು. ಆದರೆ, ಸತತ ಮಳೆ ಹಾಗೂ ಟ್ರಾಫಿಕ್ ಸಮಸ್ಯೆಯಿಂದ ಭಕ್ತರು ಪರದಾಡಿದರು. ಈ ಹುಣ್ಣಿಮೆಯಿಂದ ಐದು ಹುಣ್ಣಿಮೆಗಳವರೆಗೆ ಯಲ್ಲಮ್ಮನಗುಡ್ಡಕ್ಕೆ ಭಕ್ತರು ತಪ್ಪದೆ ಆಗಮಿಸುತ್ತಾರೆ. ಶೀಗಿ ಹುಣ್ಣಿಮೆಯಂದು ಯಲ್ಲಮ್ಮನ ದರ್ಶನ ಪಡೆದು ತಮ್ಮ ಕಷಿಭೂಮಿಗೆ ತೆರಳಿ ಚೆರಗ ಚೆಲ್ಲಿ, ಈ ಬಾರಿ ಉತ್ತಮ ಸಲು ಬರಲೆಂದು ಭೂತಾಯಿಯಲ್ಲಿ ಪ್ರಾರ್ಥಿಸುತ್ತಾರೆ. ಈ ವರ್ಷ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಗುರುವಾರವೂ ಲಕ್ಷ ಸಂಖ್ಯೆಯಲ್ಲಿ ರೈತರು ಆಗಮಿಸಿ ಯಲ್ಲಮ್ಮನ ದರ್ಶನ ಪಡೆದರು. ಏಕಕಾಲಕ್ಕೆ ಸಾವಿರಾರು ವಾಹನ ಬಂದಿದ್ದರಿಂದ ಉಗರಗೋಳ-ಯಲ್ಲಮ್ಮನಗುಡ್ಡ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿ ನಾಲ್ಕೈದು ಕಿ.ಮೀ. ದೂರದವರೆಗೂ ವಾಹನ ಸಾಲುಗಟ್ಟಿ ನಿಂತಿದ್ದವು. ಇದರ ಮಧ್ಯೆ ಮಳೆ ಸುರಿದಿದ್ದರಿಂದ ಸವಾರರು ಹೈರಾಣಾದರು.