ಶಿಸ್ತು, ಸೇವೆಯ ಮೂಲಕ ಸದೃಢರಾಗಿ: ಆಯುಕ್ತ ಡಾ. ವೈ.ಎಸ್. ವೀರಭದ್ರಪ್ಪ ಸಲಹೆ

ಶಿಸ್ತು, ಸೇವೆಯ ಮೂಲಕ ಸದೃಢರಾಗಿ: ಆಯುಕ್ತ ಡಾ. ವೈ.ಎಸ್. ವೀರಭದ್ರಪ್ಪ ಸಲಹೆ
Published on

ಹಾಸನ: ಶಿಸ್ತು ಮತ್ತು ಸೇವೆಯ ಮೂಲಕ ಸದೃಢರಾಗಿ ಜವಾಬ್ದಾರಿಯುತ ನಾಯಕನಾಗಿ ಬೆಳೆಯುವುದನ್ನು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕಲಿಸುತ್ತದೆ ಎಂದು ಜಿಲ್ಲಾ ಮುಖ್ಯ ಆಯುಕ್ತ ಡಾ. ವೈ.ಎಸ್. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಕ್ಲಬ್ ಮಾಸ್ಟರ್ ಫ್ಲ್ಯಾಕ್ ಲೀಡರ್ ಸ್ಕೌಟ್ಸ್ ಮಾಸ್ಟರ್ರ್ ಗೈಡ್ ಕ್ಯಾಪ್ಟನ್‌ಗಳಿಗಾಗಿ ತಾಲೂಕ ಸಮಾವೇಶ ಹಾಗೂ ಕೌನ್ಸಿಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಕೌಟ್ಸ್ ಆ್ಯಂಡ್ ಗೃಡ್ಸ್ ಪಠ್ಯದ ಜತೆ ಜತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದಂತಹ ಚಟುವಟಿಕೆಗಳನ್ನು ರೂಪಿಸಿ ಅವರನ್ನು ಸದೃಢಗೊಳಿಸುತ್ತದೆ ಎಂದು ಹೇಳಿದರು.
ಜವಾಬ್ದಾರಿಯುತ ನಾಗರಿಕನಾಗಿ ಹೊರಹೊಮ್ಮಬೇಕಾದ ನಾವು ನಮ್ಮ ಕರ್ತವ್ಯವನ್ನು ಹೇಗೆ ನಿರ್ವಹಿಸಬೇಕು, ಒಂಟಿತನದಿಂದ ಹೊರಬಂದು ಎಲ್ಲರೊಳಗೊಂದಾಗಿ ಸಹ ಬಾಳ್ವೆ ಮಾಡಬೇಕು. ದೇಶದ ಪ್ರಾಕೃತಿಕ ಸಂಪತ್ತನ್ನು ಹೇಗೆ ಸಂರಕ್ಷಿಸಬೇಕು ಎಂಬ ವಿಚಾರಗಳನ್ನು ತಿಳಿಸಿ ಕೊಡುವುದರ ಮೂಲಕ ಜವಾಬ್ದಾರಿಯುತ ನಾಯಕರಾಗುವಂತೆ ಸ್ವಯಂ ಶಿಸ್ತು ರೂಪಿಸಿಕೊಳ್ಳುವಂತೆ ಸೇವೆಯಿಂದಲೂ ಸದೃಢ ಮನೋಭಾವವನ್ನು ಸ್ಕೌಟ್ಸ್-ಗೈಡ್ಸ್ ಸಂಸ್ಥೆ ಯುವಜನಾಂಗಕ್ಕೆ ಬೆಳೆಸುತ್ತದೆ ಎಂದರು.
ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಗಿರಿಜಾಂಬಿಕಾ ಅವರು ಮಾತನಾಡಿ, ಮನುಷ್ಯ ಸಂಘ ಜೀವಿ. ಪ್ರಕೃತಿ ಅವನ ಅಗತ್ಯಗಳನ್ನು ಪೂರೈಸುತ್ತದೆ. ಆದರೆ ಮಾನವನ ದುರಾಸೆಯ ಫಲವಾಗಿ ಇಂದು ಅನೇಕ ಪ್ರಾಕೃತಿಕ ಅವಘಡಗಳು ಸಂಭವಿಸುತ್ತಿವೆ. ಅದರ ನಿವಾರಣೆಗೆ ಯುವ ಜನತೆ ಮುಂದಾಗಬೇಕು. ಅರಣ್ಯ ಕೃಷಿಯ ಬಗ್ಗೆ ಅರಿವು ಮೂಡಿಸುವಂತಹ, ಮಣ್ಣಿನ ಸವಕಳಿ ತಪ್ಪಿಸಲು ಗಿಡ ನೆಡುವಂತಹ ಚಟುವಟಿಕೆಗಳನ್ನು ಹೆಚ್ಚಾಗಿ ಆಯೋಜಿಸುವ ಮೂಲಕ ಮಕ್ಕಳಲ್ಲಿ ಪ್ರಕೃತಿ ರಕ್ಷಿಸಲೇಬೇಕು ಎಂಬ ಮನೋಭಾವ ಮೂಡಿಸಲು ನಾವೆಲ್ಲ ಪ್ರಯತ್ನಿಸೋಣ ಎಂದು ತಿಳಿಸಿದರು.
ಘಟಕದ ಜಿಲ್ಲಾ ಆಯುಕ್ತ ಜಯರಾಮ್ ಮಾತನಾಡಿ, ಮೌಲ್ಯಗಳೇ ಕುಸಿಯುತ್ತಿರುವ ಇಂದಿನ ಸಮಾಜದಲ್ಲಿ ಅವುಗಳನ್ನು ವೃದ್ಧಿಸುವಂತೆ ಮಾಡಲು ಸಹಜೀವನ, ಸಹಭೋಜನ, ಸೇವಾ ಕಾರ್ಯ, ಸಹಕಾರ ಮನೋಭಾವ, ಸ್ನೇಹ ಪ್ರವೃತ್ತಿ ಬೆಳೆಸುವ ಈ ಸಂಸ್ಥೆಯಲ್ಲಿ ಎಲ್ಲಾ ಮಕ್ಕಳನ್ನು ತೊಡಗಿಸಿ ಉನ್ನತ ಮೌಲ್ಯಗಳನ್ನು ಬೆಳೆಸುವಂತೆ ಮಾಡೋಣ ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಮಾತನಾಡಿ, ಪ್ರತಿ ಘಟಕವು ತಿಂಗಳುವಾರು ಒಂದೊಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ವೇಳಾಪಟ್ಟಿ ತಯಾರಿಸಿಕೊಳ್ಳಲು ಮನವಿ ಮಾಡಿದರು.
ತಾಲೂಕ ಖಜಾಂಚಿ ಮಹಾಲಿಂಗೇಗೌಡ ಮಾತನಾಡಿ, ಇದೆ ವೇಳೆ 2023-2024ನೇ ಸಾಲಿನ ಆಯವ್ಯಯ ಮಂಡಿಸಿದರು, ಕಾರ್ಯದರ್ಶಿ ಬಿ.ಎಸ್. ವನಜಾಕ್ಷಿ ಅವರು 23-24ನೇ ಸಾಲಿನ ಕಾರ್ಯ ಚಟುವಟಿಕೆಗಳ ಸಂಕ್ಷಿಪ್ತ ವರದಿ ಮಂಡಿಸಿದರು. ಜತೆಗೆ 24- 25ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯನ್ನು ಎಲ್ಲ ಶಿಕ್ಷಕರಿಗೆ ವಿತರಿಸುವ ಮೂಲಕ ಕ್ರಿಯಾ ಯೋಜನೆ ಮಂಡಿಸಿದರು. ಹಿರಿಯ ಗೈಡರ್ ಕಾಂಚನಾಮಾಲಾ ದಳ ನಡೆಸುವಲ್ಲಿ ಶಿಕ್ಷಕರಿಗೆ ಎದುರಾಗುವ ಸಮಸ್ಯೆ ಕುರಿತು ಹಾಜರಿದ್ದ ಶಿಕ್ಷಕರೊಂದಿಗೆ ಸಮಾಲೋಚಿಸಿದರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಿಯಾಂಕಾ ಅವರು ಸಂಸ್ಥೆಯ ಆಡಳಿತಾತ್ಮಕ ನಿಯಮಗಳ ಬಗ್ಗೆ ತಿಳಿಸಿ, ಹೊಸದಾಗಿ ನವೀಕರಣಗೊಂಡ ಶಾಲೆಗಳ ಚಾರ್ಟರ್ ನಂಬರ್‌ವುಳ್ಳ ಪ್ರಮಾಣಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಸಹ ಕಾರ್ಯದರ್ಶಿ ಶುಭಾ ಮಂಗಳಾ, ಜಿಲ್ಲಾ ಖಜಾಂಚಿ ಆರ್.ಎಸ್. ರಮೇಶ್, ಗೈಡ್ ಕ್ಯಾಪ್ಟನ್ ವೈ.ಡಿ. ಪದ್ಮಾ ಸೋಫಿಯಾ ಫರ್ನಾಂಡಿಸ್, ನಿವೃತ್ತ ಶಿಕ್ಷಕಿ ಹಾಗೂ ಗೈಡ್ ಕ್ಯಾಪ್ಟನ್ ಕೆ.ಸಿ. ಗೀತಾ, ಸ್ಕೌಟ್ಸ್ ಮಾಸ್ಟರ್ ದೇವರಾಜು ಸೇರಿದಂತೆ ಸ್ಕೌಟ್ಸ್ ಗೈಡ್ಸ್ ಶಿಕ್ಷಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net