ಶಿಸ್ತು ಸಮಯಪ್ರಜ್ಞೆಯಿಂದ ಯಶಸ್ಸು, ಸಚಿವ ಎಂಟಿಬಿ ನಾಗರಾಜ್ ಸಲಹೆ, ಜಿಲ್ಲಾ ಮಟ್ಟದ ಯುವಜನ ಮೇಳ

1d694f07-f52b-4537-981b-c62404870c13
Published on

ಬೆಂಗಳೂರು ಗ್ರಾಮಾಂತರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನರು ಶಿಸ್ತು, ಸಮಯಪ್ರಜ್ಞೆಯ ಮೂಲಕ ಯಶಸ್ಸು ಪಡೆಯಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇಲಾಖೆ ಸಹಯೋಗದೊಂದಿಗೆ ದೇವನಹಳ್ಳಿಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಜಿಲ್ಲಾಮಟ್ಟದ ಯುವಜನ ಮೇಳದಲ್ಲಿ ಮಾತನಾಡಿದರು. ಯುವಜನತೆ ಸ್ವಾಮಿ ವಿವೇಕಾನಂದರ ತತ್ವಾದರ್ಶ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಏಳಿ ಏದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ ಎಂಬ ಸ್ವಾಮಿ ವಿವೇಕಾನಂದರ ಸಂದೇಶದಂತೆ ಯುವಜನತೆ ತತ್ವಾದರ್ಶ ಅಳವಡಿಸಿಕೊಳ್ಳುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಂಡು ದೇಶಕ್ಕೆ ಕೀರ್ತಿತರಬೇಕು ಎಂದು ಕರೆ ನೀಡಿದರು.

ಸಾವಿನ ನಂತರವೂ ಸಮಾಜ ಸ್ಮರಿಸುವಂತಹ ಉತ್ತಮ ಕಾರ್ಯಗಳನ್ನು ಮಾಡಬೇಕು, ಯುವಜನತೆ ಸಮಯಪಾಲನೆ, ನಿಷ್ಠೆಯೊಂದಿಗೆ ಭವಿಷ್ಯ ರೂಪಿಸಿಕೊಳ್ಳಲು ಆಸಕ್ತಿ ವಹಿಸಬೇಕು ಎಂದರು.

ಸ್ವಾಮಿ ವಿವೇಕಾನಂದರು ಯುವಜನತೆಗೆ ಪ್ರೇರೇಪಣೆ ತುಂಬಿದ ಮಹಾನ್ ವ್ಯಕ್ತಿಯಾಗಿದ್ದು, ಅವರಂತೆ ಸದೃಢ ಭಾರತ ಕಟ್ಟುವಲ್ಲಿ ಯುವಜನತೆಯ ಪಾತ್ರ ಅಪಾರವಾಗಿದೆ. ಹೇಡಿಯಾಗಿ ನೂರು ವರ್ಷ ಬದುಕುವುದಕ್ಕಿಂತ ಶೂರರಾಗಿ ಒಂದು ದಿನ ಬದುಕಿದರೆ ಸಾಕು ಎಂಬ ವಿವೇಕರ ವಾಣಿಯಂತೆ ಯುವಜನತೆ ಸಕಾರಾತ್ಮಕ ಅಂಶಗಳೊಂದಿಗೆ ಧೀರತನದಲ್ಲಿ ಜೀವನ ನಡೆಸಬೇಕು ಎಂದು ಹೇಳಿದರು.

ವಿವೇಕಾನಂದರು ಸ್ಫೂರ್ತಿ: ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ 1995ರಲ್ಲಿ ಕೇಂದ್ರ ಸರ್ಕಾರ ಯುವಜನೋತ್ಸವ ಕಾರ್ಯಕ್ರಮ ನಡೆಸಲು ಘೋಷಿಸಿತು ಎಂದು ಮಾಹಿತಿ ನೀಡಿದರು. ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಯುವಜನೋತ್ಸವ ಕಾರ್ಯಕ್ರಮ ನಡೆಯುತ್ತದೆ. ವಿವೇಕಾನಂದರು ಯುವಶಕ್ತಿಯ ಬೆಳವಣಿಗೆಗೆ ಸ್ಫೂರ್ತಿಯಾಗಿದ್ದು, ಯುವಜನತೆ ಧೈರ್ಯ, ಸ್ಥೈರ್ಯದಿಂದ ಬದುಕುವ ಹಾಗೂ ಏಕಾಗ್ರತೆಯ ಚಿತ್ತದಿಂದ ಸಾಧನೆ ಮಾಡುವ ಮನಸ್ಥಿತಿ ಹೊಂದಬೇಕು ಎಂದು ತಿಳಿಸಿದರು.

ಯೋಗಾಸನ: ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರದ ಯೋಗಾಕೇಂದ್ರದ ವಿದ್ಯಾರ್ಥಿಗಳು ಯೋಗದವಿವಿಧ ಆಸನಗಳನ್ನು ಪ್ರದರ್ಶಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಅವರು ಸ್ವಾಮಿ ವಿವೇಕಾನಂದರ ಕುರಿತು ಹಾಗೂ ರಾಷ್ಟ್ರೀಯ ಯುವ ದಿನದ ಕುರಿತು ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net