

ಹೊಳೆನರಸೀಪುರ: ಜೀವನದಲ್ಲಿ ಶಿಸ್ತು ರೂಢಿಸಿಕೊಂಡರೆ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಹೊಳೆನರಸೀಪುರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ಸೋಮಲಿಂಗೇಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ದೊಡ್ಡಕಾಡನೂರು ಗ್ರಾಮದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನದೇ ಆದ ಗುರಿ ಇರಬೇಕು. ಗುರಿ ಮುಟ್ಟಲು ಶಿಕ್ಷಕರ ನೆರವು ಪಡೆಯಬೇಕೆಂದು ಕಿವಿಮಾತು ಹೇಳಿದರು.
ಜೆಎಸ್‌ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಚೌಡಯ್ಯ ಕಟ್ನವಾಡಿ ಮಾತನಾಡಿ, ಯಾವುದೇ ಒಳ್ಳೆಯ ಕೆಲಸವನ್ನು ಮಾಡಬೇಕು ಎನಿಸಿದ ಕೂಡಲೇ ಮಾಡಿಬಿಡಿ. ನಾಳೆ ಮಾಡೋಣ ಎಂದು ಆಲಸ್ಯದಿಂದ ಮುಂದಕ್ಕೆ ಹಾಕಬೇಡಿ. ನಾಳೆ ಮಾಡುವ ಕೆಲಸವನ್ನು ಇಂದೇ ಮಾಡಬೇಕು. ಇಂದು ಮಾಡಬೇಕು ಅನ್ನುವ ಕೆಲಸವನ್ನು ಈಗಲೇ ಮಾಡಬೇಕು. ಆಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿನಿ ಭಾವನಾ ಅವರನ್ನು ಸನ್ಮಾನಿಸಲಾಯಿತು. ಪ್ರೌಢಶಾಲಾ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇತರರಿದ್ದರು.