ಶಿಸ್ತು ಮರೆತ ದಲಾಲರು, ವ್ಯಾಪಾರಸ್ಥರು

1-gdg-7
Published on

ಗದಗ: ಲಾಕ್​ಡೌನ್ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಎಲ್ಲ ವ್ಯಾಪಾರ ವಹಿವಾಟು ಬಂದ್ ಮಾಡಲಾಗಿತ್ತು. ಆದರೆ, ದಲಾಲರು, ಖರೀದಿದಾರರು ಒತ್ತಾಯದ ಮೇರೆಗೆ ವಾರದಲ್ಲಿ ನಾಲ್ಕು ದಿನ ವಹಿವಾಟು ಮಾಡಲು ಜಿಲ್ಲಾಡಳಿತ ಆದೇಶ ನೀಡಲಾಗಿದ್ದು, ಬುಧವಾರ ಎಪಿಎಂಸಿಯಲ್ಲಿ ಜನಜಂಗುಳಿ ಹೆಚ್ಚಾಗಿತ್ತು.

ದಲಾಲರು, ಖರೀದಿದಾರರು ಹಾಗೂ ಅನೇಕ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ತಮ್ಮ ಕಾರ್ಯದಲ್ಲಿ ನಿರತರಾಗಿದ್ದರು. ಜನರಿಗೆ ಮಾಸ್ಕ್​ಗಳನ್ನು ಹಾಕಿಕೊಳ್ಳಬೇಕು, ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರೂ ಪ್ರಯೋಜನ ವಾಗಲಿಲ್ಲ. ಯಥಾ ಪ್ರಕಾರ ತಮ್ಮಷ್ಟದಂತೆ ನಡೆದುಕೊಂಡಿದ್ದು ಕಂಡು ಬಂದಿತು.

ವ್ಯಾಪಾರಕ್ಕೆ ವಿನಾಯಿತಿ: ದಲಾಲರು, ಖರೀದಿದಾರರ ವರ್ತಕರ ಸಂಘದ ಮನವಿ ಮೇರೆಗೆ ಅಂಗಡಿ ಅಥವಾ ಸಂಸ್ಕರಣಾ ಘಟಕದಲ್ಲಿ ಸಂಗ್ರಹಿಸಿಡಲಾದ ಕಡಲೆ, ಹೆಸರು, ಗೋಧಿ, ಜೋಳ ಹಾಗೂ ಇತರೆ ದವಸ ಧಾನ್ಯಗಳು ಗಾಳಿ ಇರದೇ ತೇವಾಂಶ ವ್ಯತ್ಯಾಸದಿಂದ ಹಾಳಾಗುತ್ತಿರುವುದನ್ನು ತಡೆಯುವುದು ಅವಶ್ಯವಿರುವುದರಿಂದ ಹಾಗೂ ಆಹಾರ ಧಾನ್ಯಗಳ ಅಭಾವವಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಸರ್ಕಾರದ ಮಾರ್ಗಸೂಚಿಗಳನ್ವಯ ಕರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ವಿಧಿಸಿದ ಲಾಕ್​ಡೌನ್ ನಿಂದ ಕೃಷಿ ಉತ್ಪನ್ನಗಳ ವ್ಯಾಪಾರಕ್ಕೆ ಜಿಲ್ಲಾಡಳಿತ ವಿನಾಯಿತಿ ನೀಡಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ಅಂಗಡಿಗಳ ಬಾಗಿಲುಗಳನ್ನು ತೆರೆಯಲು ಹಾಗೂ ಸಂಸ್ಕರಣಾ ಘಟಕಗಳಲ್ಲಿ ದವಸ- ಧಾನ್ಯಗಳನ್ನು ಸಂಸ್ಕರಿಸಿ ರವಾನೆ ಮಾಡಲು ಅನುಮತಿ ನೀಡಲಾಗಿದ್ದು, ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ದಲಾಲರ, ಖರೀದಿದಾರರ ಅಂಗಡಿಗಳನ್ನು ಸೋಮವಾರ, ಬುಧವಾರ, ಗುರುವಾರ ಮತ್ತು ಶನಿವಾರದ ದಿನಗಳಂದು ಮಾತ್ರ ತೆರೆಯಬೇಕು ಎಂದು ಸೂಚನೆ ನೀಡಲಾಗಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರು ಅಂಗಡಿಯಲ್ಲಿರುವ ದಾಸ್ತಾನನ್ನು ಪರಿವೀಕ್ಷಿಸಿ ದಾಸ್ತಾನು ಇದ್ದಲ್ಲಿ ಮಾತ್ರ ಒಂದು ದಲಾಲಿ, ಖರೀದಿ ಅಂಗಡಿಗೆ ಒಂದು ಪಾಸ್ ನೀಡಬೇಕು. ಪಾಸ್ ಅವಧಿಯು ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಸಂಸ್ಕರಣಾ ಘಟಕಗಳನ್ನು ಪರಿವೀಕ್ಷಿಸಿ ಸಂಸ್ಕರಣಾ ಚಟುವಟಿಕೆ ಅಥವಾ ದಾಸ್ತಾನು ಚಾಲ್ತಿಯಲ್ಲಿದ್ದರೆ ಮಾತ್ರ ಅವಶ್ಯಕತೆಗೆ ಅನುಗುಣವಾಗಿ ನಿಯಮಿತವಾಗಿ ಪಾಸ್ ವಿತರಿಸುವುದು. ಸಂಸ್ಕರಣಾ ಘಟಕದ ಕಾರ್ಯವನ್ನು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ನಿರ್ವಹಿಸಬೇಕು. ಪಾಸ್​ಗಳನ್ನು ಬೇರೆಯವರಿಗೆ ವರ್ಗಾಯಿಸಬಾರದು. ದಲಾಲ, ಖರೀದಿದಾರರು ಟೆಂಡರ್ ನಡೆಸಬಾರದು.

ಸಂಸ್ಕರಣಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಹಾಗೂ ಹಮಾಲರಿಗೆ ಕಡ್ಡಾಯವಾಗಿ ಮಾಸ್ಕ್ ಹಾಗೂ ಇತರೆ ಸುರಕ್ಷಿತ ವಸ್ತ್ರಗಳನ್ನು ನೀಡಬೇಕು. ಸಂಸ್ಕರಣಾ ಘಟಕಗಳಲ್ಲಿ ಸಂಸ್ಕರಿಸಿದ ದವಸ ಧಾನ್ಯಗಳನ್ನು ನಿಯಮಾನುಸಾರ ಸಂಬಂಧಪಟ್ಟವರಿಂದ ಪರವಾನಗಿ ಪಡೆದುಕೊಂಡು ರವಾನೆ ಮಾಡುವುದು. ಪೇಟೆ ಕಾರ್ಯಕರ್ತರು ಕಡ್ಡಾಯವಾಗಿ ಮಾಸ್ಕ್ ಹಾಗೂ ಇತರೆ ಸುರಕ್ಷಿತ ವಸ್ತ್ರಗಳನ್ನು ಉಪಯೋಗಿಸಿ ರೋಗಾಣು ಹರಡದಂತೆ ನೋಡಿಕೊಳ್ಳಬೇಕು. ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರ ಜತೆಗೆ ಇತರರೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಹಸ್ತಲಾಘವ ಮಾಡುವುದು ನಿಷಿದ್ಧ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net