

ಮೈಸೂರು: ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಇರುವ ಅವಕಾಶಗಳನ್ನು ಬಳಸಿಕೊಂಡು ಪ್ರತಿಭೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಪ್ರೊ.ಎಂ.ಪುಷ್ಪವತಿ ಹೇಳಿದರು.
ನಗರದ ಎಂ.ಎಂ.ಕೆ. ಮತ್ತು ಎಸ್.ಡಿ.ಎಂ. ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು
ಓದುವ ಪುಸ್ತಕಗಳು ಸಾಧನೆಯತ್ತ ಕರೆದೊಯ್ಯಬೇಕೇ ಹೊರತು ಕನಸಿನಲ್ಲಿ ಕಳೆದು ಹೋಗಬಾರದು. ಜೀವನ ಶಿಸ್ತು ಬದ್ಧವಾಗಿರಲು ಒಂದು ವೇಳಾಪಟ್ಟಿ ಅನುಸರಿಸಬೇಕು. ತಾಳ್ಮೆಯೂ ಬಹು ಮುಖ್ಯ. ಸಾಧನೆ ಎಂಬುದು ನಮ್ಮ ಬಯೋಡೇಟಾದಲ್ಲಿ ಇರುವುದಿಲ್ಲ.
ನಾವು ಸಾಧಿಸುವ ರೀತಿಯಲ್ಲಿ ಇರುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ತಮ್ಮ ಕರ್ತವ್ಯಗಳನ್ನು ತಿಳಿಸಿದ ಅವರು, ಸಕ್ರಿಯ ಚಟುವಟಿಕೆಗಳ ಮೂಲಕ ಎಲ್ಲ ವಿದ್ಯಾರ್ಥಿಗಳ ಪ್ರತಿಭೆಗೆ ಅವಕಾಶ ನೀಡಬೇಕು. ಎಲ್ಲ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ ಜೀವನ ಕೌಶಲ ಬೆಳೆಸಿಕೊಳ್ಳಬೇಕು ಎಂದರು.
ಎಂ.ಎಂ.ಕೆ. ಮತ್ತು ಎಸ್.ಡಿ.ಎಂ. ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲೆ ಪ್ರೊ.ಎನ್.ಭಾರತಿ ಮಾತನಾಡಿ, ಬದುಕೆಂಬ ದೋಣಿಯಾನ ನಮ್ಮ ಕೈಯಲ್ಲೇ ಇರಬೇಕು. ಬಯಸಿದ ಗುರಿಯನ್ನು ಮುಟ್ಟಲು ನಿರಂತರವಾಗಿ ಶ್ರಮಿಸಬೇಕು. ಬಿತ್ತಿದ ತಕ್ಷಣ ಬೆಳೆ ಬರುವುದಿಲ್ಲ. ಅದಕ್ಕಾಗಿ ಶ್ರಮಿಸಬೇಕು. ಸಂಘಟನೆಯ ಶಕ್ತಿ ಬಹು ಮುಖ್ಯವಾದದ್ದು, ಒಗ್ಗಟ್ಟಿನಿಂದ ಉತ್ತಮ ಗುರಿ ಸಾಧಿಸಬಹುದು ಎಂದರು.
ಪ್ರಾಂಶುಪಾಲೆ ನಯನಕುಮಾರಿ ಮಾತನಾಡಿ, ವಿದ್ಯಾರ್ಥಿಗಳು ಈ ವೇದಿಕೆಯಲ್ಲಿ ತಮ್ಮ ಶೈಕ್ಷಣಿಕ ಪಠ್ಯಪೂರಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದರು
ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ, ಭೌತಶಾಸ್ತ್ರ ಉಪನ್ಯಾಸಕಿ ಕೆ.ಎನ್.ಜಿತ ಅವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿ, ಪ್ರಮಾಣವಚನ ಬೋಧಿಸಿದರು.
ಸಭಾ ಕಾರ್ಯಕ್ರಮದ ನಂತರ ಮನರಂಜನಾ ಕಾರ್ಯಕ್ರಮ ನಡೆಯಿತು. ಕಾಲೇಜಿನ ಎಲ್ಲ ಉಪನ್ಯಾಸಕರು, ಕಚೇರಿ ಸಿಬ್ಬಂದಿ , ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.