ಶಿಸ್ತಿನಿಂದ ಕಲಿಕೆಯಲ್ಲಿ ತೊಡಗಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ

9
Published on

ಮೈಸೂರು: ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾಗಿದ್ದು, ಶ್ರದ್ಧೆ, ಶಿಸ್ತಿನಿಂದ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಗಳ ಸಂಯೋಜಕ ಎನ್.ಆರ್.ಮಂಜುನಾಥ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೇಶವಕೃಪಾ ಸಂವರ್ಧನ ಸಮಿತಿಯಿಂದ ‘ಅಭ್ಯದಯ’ ಕಾರ್ಯಕ್ರಮದಡಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನಗರದಲ್ಲಿ ಇತ್ತೀಚೆಗೆ ಆರಂಭಿಸಿದ ಉಚಿತ ಬೋಧನಾ ತರಗತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯಸಿ ಪ್ರಮುಖ ಘಟ್ಟವಾಗಿದೆ. ಈ ಹಂತದಲ್ಲಿ ಶ್ರದ್ಧೆ, ಶಿಸ್ತಿನಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಪದವಿಗೆ ಬರುವ ವೇಳೆಗೆ ತಮ್ಮ ಜೀವನದ ದಿಕ್ಕು ಯಾವುದು ಎನ್ನುವುದು ತಿಳಿದಿರಬೇಕು ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಈಗ ಸಾಕಷ್ಟು ಸುಧಾರಣೆಗಳು ಆಗುತ್ತಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಜ್ಞಾನವೃದ್ಧಿಸಿಕೊಳ್ಳಬೇಕು. ಚನ್ನಾಗಿ ಓದಿ ಉತ್ತಮ ಅಂಕ ಗಳಿಸುವ ಜತೆಗೆ ಮಾದರಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಅವಕಾಶ ಇಲ್ಲದವರು ಕೈಚೆಲ್ಲಿ ಕೂರದೆ ಇರುವ ಅವಕಾಶ ಬಳಸಿಕೊಳ್ಳಬೇಕು. ಉದ್ಯೋಗ ಇಲ್ಲ ಎಂದು ಕೆಲಸಕ್ಕೆ ಅಲೆದಾಡುತ್ತಾ ಸಮಯ ವ್ಯರ್ಥ ಮಾಡದೆ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಇತರರಿಗೂ ಉದ್ಯೋಗ ನೀಡುವಂತಹ ಉದ್ಯಮಿಗಳಾಗಬೇಕು ಎಂದು ತಿಳಿಸಿದರು.
ಅಭ್ಯುದಯ ಮಾರ್ಗದರ್ಶನ ಮಂಡಳಿಯ ಮಂಜುನಾಥ ಹೆರೂರ್ ಮಾತನಾಡಿ, ಸಾಮಾಜಿಕ ಕಾರ್ಯದಡಿ ಅಭ್ಯುದಯದಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಬೋಧನೆ ಜೊತೆಗೆ ವ್ಯಕ್ತಿತ್ವ ವಿಕಸನ, ಸ್ವಯಂ ಉದ್ಯೋಗ ಸೇರಿದಂತೆ ಇನ್ನಿತರೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.
ಈಗ 60 ಕಡೆಗಳಲ್ಲಿ ನುರಿತ ಶಿಕ್ಷಕರಿಂದ ಬೋಧನೆ ನಡೆಸಲಾಗುತ್ತಿದೆ. ಮೈಸೂರಿನಲ್ಲಿ ಆರು ಕಡೆ ಎಸ್‌ಎಸ್‌ಎಲ್‌ಸಿ ಜತೆಗೆ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಬೋಧನೆ ನೀಡುವ ಉದ್ದೇಶವಿದೆ. ಗೃಹಿಣಿಯರಿಗೆ ಉಚಿತವಾಗಿ ಕಂಪ್ಯೂಟರ್, ಹೊಲಿಗೆ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ, ಕುತೂಹಲ ತಣಿಸುವ ವಿಜ್ಞಾನ ಪ್ರಯೋಗಾಲಯ ಆರಂಭಿಸಲಾಗುವುದು. ಅಲ್ಲದೆ, ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆ ಅಡಿ ಶುಲ್ಕ ಭರಿಸಲಾಗುವುದು ಎಂದು ಹೇಳಿದರು.
ಶಿಕ್ಷಕ ವಿಷ್ಣುಪ್ರಸಾದ್ ಮಾತನಾಡಿ, ಮೂರು ತಿಂಗಳ ಕಾಲ ನಡೆಯುವ ಈ ಉಚಿತ ಬೋಧನೆಯ ಪ್ರಯೋಜನ ಪಡೆದುಕೊಂಡು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕು. ಉದ್ಯೋಗಕ್ಕೆ ಸೇರಿದ ಮೇಲೆ ತಮ್ಮ ಕೈಲಾದಷ್ಟು ಸಾಮಾಜಿಕ ಕಾರ್ಯದಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದರು.
ಆಯೋಜಕರಾದ ಪಣೀಂದ್ರಕುಮಾರ್, ರಘೋತ್ತಮ್, ಶ್ರೀನಿವಾಸನ್ ಇತರರು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net