

ಮೈಸೂರು: ಸಂಶೋಧನಾ ವಿದ್ಯಾರ್ಥಿಗಳ ಶಿಷ್ಯವೇತನ ಹೆಚ್ಚಿಸುವ ಜತೆಗೆ ಹೊಸ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸುವಂತೆ ಒತ್ತಾಯಿಸಿ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳ ವೇದಿಕೆಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಸಂಶೋಧನೆ ಕಾರ್ಯ ಕೈಗೊಳ್ಳಲು ನೀಡುತ್ತಿರುವ ವಿದ್ಯಾರ್ಥಿ ವೇತನ ಸಾಕಾಗುತ್ತಿಲ್ಲ. ಆದ್ದರಿಂದ ವಿದ್ಯಾರ್ಥಿ ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೆ 12,000 ರೂ. ಸಂಶೋಧನಾ ಶಿಷ್ಯ ವೇತನ ನೀಡುತ್ತಿದೆ. ಇಂದಿನ ಬೆಲೆ ಏರಿಕೆ ದಿನದಲ್ಲಿ ಈ ಶಿಷ್ಯವೇತನದಲ್ಲಿ ಉತ್ತಮ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ತುಂಬ ಕಷ್ಟ ಸಾಧ್ಯವಾಗುತ್ತದೆ ಎಂದರು.
ಶಿಷ್ಯವೇತನವನ್ನು 3 ವರ್ಷಗಳಿಗೆ ಮಾತ್ರ ನೀಡಲಾಗುತ್ತಿದ್ದು, ಅದನ್ನು 5 ವರ್ಷಗಳಿಗೆ ಹೆಚ್ಚು ಮಾಡಬೇಕು. ಸಂಶೋಧನೆಗೆ ಪ್ರವೇಶಾತಿ ಪಡೆಯುವ ಪ್ರತಿಯೊಬ್ಬರಿಗೂ 30 ಸಾವಿರ ರೂ. ಶಿಷ್ಯವೇತನ ನೀಡಬೇಕು. ಎಲ್ಲ ವರ್ಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಮಾನ ಶಿಷ್ಯವೇತನವನ್ನು ಯಾವುದೇ ತಾರತಮ್ಯವಿಲ್ಲದೆ ನೀಡುವ ಮೂಲಕ ಸಂಶೋಧನೆಗೆ ನೆರವಾಗಬೇಕು ಎಂದು ಆಗ್ರಹಿಸಿದರು.
ಸಂಶೋಧನಾ ವಿದ್ಯಾರ್ಥಿಗಳಿಗೆ ಸಮಾನ ಶಿಷ್ಯವೇತನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಜತೆಗೆ, ಹೊಸದಾಗಿ ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ಕೂಡಲೇ ಅರ್ಜಿ ಆಹ್ವಾನಿಸಿ ಎಲ್ಲರಿಗೂ ಶಿಷ್ಯವೇತನ ನೀಡಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರು, ಪ್ರತಿಯೊಬ್ಬರಿಗೂ ಸಮಾನವಾದ ಶಿಷ್ಯವೇತನ ನೀಡುವ ಕುರಿತು ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವೇದಿಕೆಯ ಎನ್.ಎಸ್. ನೀಲಪ್ಪ ದೇಸಾಯಿ, ಜಿ. ಶಿವಶಂಕರ್, ಪ್ರಸನ್ನಕುಮಾರ್, ಬಿ. ರಂಜಿತಾ, ಸುಶ್ಮಿತಾ, ದರ್ಶನ್, ಬಸವಣ್ಣ ಇತರರು ಇದ್ದರು.