ಶಿಷ್ಯವೇತನ ಹಗರಣ ತನಿಖೆಗೆ ವೇಗ ನೀಡಿ

Sharanu IT (Ambe singhe)
Published on

ಕಲಬುರಗಿ: ನಗರದ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಪಿಜಿ ವಿದ್ಯಾರ್ಥಿಗಳ ಶಿಷ್ಯ ವೇತನವನ್ನು ಅಕ್ರಮವಾಗಿ ವಾಪಸ್ ಪಡೆದ ಹಗರಣದ ಕುರಿತು ದೂರು ನೀಡಿ, ಹಲವು ದಿನವಾದರೂ ಪೊಲೀಸರು ಎಫ್‌ಐಆರ್ ದಾಖಲಿಸುತ್ತಿಲ್ಲ. ಕೂಡಲೇ ತನಿಖೆಗೆ ವೇಗ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶರಣಬಸಪ್ಪ ಅಂಬೆಸಿಂಗೆ ಆಗ್ರಹಿಸಿದರು.

ಈ ಕುರಿತು ದಾಖಲೆ ಕೇಳಿದ್ದ ಪೊಲೀಸರಿಗೆ ದಾಖಲೆ ಒದಗಿಸಲಾಗಿದೆ. ಅಲ್ಲದೆ ವಿದ್ಯಾರ್ಥಿಗಳು ಸಹ ಪೊಲೀಸರಿಗೆ ಸಾಕ್ಷ ನೀಡಲು ಸಿದ್ಧರಾಗಿದ್ದಾರೆ. ಆದರೆ ಪೊಲೀಸರು ಎಫ್‌ಐಆರ್ ಮಾಡಿಕೊಳ್ಳುತ್ತಿಲ್ಲ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಮನವಿ ಮಾಡಿದ್ದರೂ, ಸ್ಪಂದಿಸುತ್ತಿಲ್ಲ. ಹಗರಣದ ಹಿಂದೆ ರಾಜಕೀಯ ಕೈವಾಡವಿರುವುದು ಕಂಡು ಬರುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ತನಿಖೆ ನಡೆಸುವಂತೆ ಎಐಜಿಪಿ ಕಲಾಕೃಷ್ಣ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಕಾಲೇಜಿನ ೧೦೦ ವಿದ್ಯಾರ್ಥಿಗಳು ಸ್ಟೆಫಂಡ್ ಹಣ, ಚೆಕ್ ಮೂಲಕ ವಿಥ್‌ಡ್ರಾ ಮಾಡಿದ ಹಣ ವಾಪಸ್ ನೀಡುವಂತೆ ಡೀನ್‌ಗೆ ಪತ್ರವನ್ನು ಬರೆದಿದ್ದಾರೆ. ಹಣ ವಾಪಸ್ ನೀಡದಿದ್ದರೆ ವಿದ್ಯಾರ್ಥಿಗಳು ಗುರುವಾರ ಅಥವಾ ಶುಕ್ರವಾರ ಕಮೀಷನರ್ ಕಚೇರಿಗೆ ಭೇಟಿ ನೀಡಿ, ದೂರು ನೀಡಲಿದ್ದಾರೆ ಎಂದು ತಿಳಿಸಿದರು.

ಕಾಲೇಜಿನ ಡೀನ್ ನನಗೆ ಗೊತ್ತಿಲ್ಲ ಎಂದು ವಿದ್ಯಾರ್ಥಿಗಳ ಎದುರು ಹೇಳುತ್ತಿದ್ದಾರೆ. ಅಕೌಂಟ್ಸ್ ವಿಭಾಗ, ಆಡಳಿತ ಮಂಡಳಿಯವರಿಗೆ ಗೊತ್ತು ಎನ್ನುತ್ತಿದ್ದಾರೆ. ಹಾಗಾದರೆ ಇದು ಯಾರಿಗೆ ಗೊತ್ತಿದೆ ಎಂಬುದು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net