ಶಿಷ್ಯರು ಗುರುಗಳನ್ನು ಮೀರಿ ಬೆಳೆಯಬೇಕು

17 Dwd 10
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಷ್ಯ ಗುರುವನ್ನು ಮೀರಿಸಿ ಬೆಳೆದಾಗ ಆಗುವ ಸಂತೋಷ ಅಷ್ಟಿಷ್ಟಲ್ಲ. ನನ್ನ ಶಿಷ್ಯ ಎಂದು ಹೇಳಿಕೊಳ್ಳುವ ಎತ್ತರಕ್ಕೆ ವಿದ್ಯಾರ್ಥಿಗಳು ಬೆಳೆಯಬೇಕು. ಅದರಲ್ಲೂ ಕಲಿಸಿದ ಗುರುಗಳನ್ನು ಶಿಷ್ಯರು ಹುಡುಕಿಕೊಂಡು ಬಂದು ಸನ್ಮಾನ ಮಾಡಿದಾಗ ಹೃದಯ ತುಂಬಿ ಬರುತ್ತದೆ ಎಂದು ವಿದ್ಯಾಗಿರಿ ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ವಿದ್ಯಾಗಿರಿ ಜೆಎಸ್‌ಎಸ್ ಕಾಲೇಜಿನ ಸಭಾಭವನದಲ್ಲಿ ೧೯೮೫- ೮೬ನೇ ಸಾಲಿನ ವಿದ್ಯಾರ್ಥಿಗಳು ಶುಕ್ರವಾರ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
೧೯೮೫ನೇ ಸಾಲಿನ ಹಲವಾರು ವಿದ್ಯಾರ್ಥಿಗಳು ಸೇವಾ ನಿವೃತ್ತಿ ಹೊಂದಿದ್ದಾರೆ. ಇಂಥ ಸಂದರ್ಭದಲ್ಲಿ ನಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ಸಂತೋಷದ ಸಂಗತಿ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಿಕ್ಷಣತಜ್ಞ ಸುರೇಶ ಕುಲಕರ್ಣಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳ ಸ್ವಭಾವಕ್ಕೂ, ಹಿಂದಿನ ವಿದ್ಯಾರ್ಥಿಗಳ ಸ್ವಭಾವಕ್ಕೂ ವ್ಯತ್ಯಾವ್ಯಾಸವಿದೆ. ಆ ದಿನಗಳಲ್ಲಿ ಗುರುಗಳಿಗಿದ್ದ ಬದ್ಧತೆ ಈಗಿಲ್ಲ. ಗುರು- ಶಿಷ್ಯರ ಅನ್ಯೋನ್ಯತೆ ಇಂದಿನ ದಿನಗಳಲ್ಲಿ ಕಾಣುತ್ತಿಲ್ಲ. ನೈತಿಕ ಸಂಸ್ಕಾರಯುತ ಶಿಕ್ಷಣವೇ ಇದಕ್ಕೆಲ್ಲ ಪರಿಹಾರ ಎಂದರು.
ವಿದ್ಯಾರ್ಥಿಗಳು ೩೬ ವರ್ಷಗಳ ಹಿಂದೆ ತಾವು ಕಲಿತ ತರಗತಿಗಳಿಗೆ ತೆರಳಿ ಹಳೆಯ ನೆನಪುಗಳನ್ನು ಮೆಲಕು ಹಾಕಿದರು. ಕಲಿಸಿದ ಗುರುಗಳಾದ ಎಚ್.ಎಲ್. ಭಜಂತ್ರಿ, ಕೆ.ಎಚ್. ಆಡೂರು, ಮಾಲತಿ ಪಟ್ಟಣಶೆಟ್ಟಿ, ಅನಿಲ ಧಾರವಾಡಕರ, ಎಸ್.ವಿ. ಭಟ್ ಅವರನ್ನು ಸನ್ಮಾನಿಸಲಾಯಿತು. ಹಳೆಯ ವಿದ್ಯಾರ್ಥಿಗಳಾದ ಆರ್.ಎಸ್. ಪಾಟೀಲ, ಕೆ.ಎನ್. ನರಹರಿ ಎ.ವಿ. ಜಯರಾಮ್, ಎಸ್.ಜಿ. ಕೊಪ್ಪದ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net