

ನಾಗಮಂಗಲ: ತಾಲೂಕಿನಲ್ಲಿ ನಡೆಯುತ್ತಿರುವ ಬಹುತೇಕ ಕಾರ್ಯಕ್ರಮಗಳಿಗೆ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿಯನ್ನು ಶಿಷ್ಟಾಚಾರದಂತೆ ಆಹ್ವಾನಿಸುತ್ತಿಲ್ಲ. ಅಲ್ಲದೆ ಆಹ್ವಾನ ಪತ್ರಿಕೆಯಲ್ಲಿಯೂ ಅವರ ಹೆಸರನ್ನು ಕೈಬಿಡಲಾಗುತ್ತಿದ್ದು, ಇದೇ ರೀತಿ ಶಿಷ್ಟಾಚಾರ ಉಲ್ಲಂಘಿಸಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಚಂದ್ರಮೌಳಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಪಂ ಆಡಳಿತಾಧಿಕಾರಿ ಲತಾ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಮತ್ತು ಕೆಡಿಪಿ ಸಭೆಯಲ್ಲಿ ಮಾತನಾಡಿದರು.
ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಬರುವ ಇಲಾಖೆಗಳು ತಮ್ಮ ಇಲಾಖಾ ಕಾರ್ಯಕ್ರಮಗಳಲ್ಲಿ ತಾಪಂ ಆಡಳಿತಾಧಿಕಾರಿಯನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿವೆ. ನಾವೇ ಹೇಳಿ ನಮ್ಮ ಹೆಸರನ್ನು ಸೇರಿಸಬೇಕಾದ ದುಸ್ಥಿತಿ ಬಂದಿದೆ. ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಆಡಳಿತಾಧಿಕಾರಿ ಹೆಸರು ಹಾಕಿಲ್ಲ ಹಾಗೂ ಅವರಿಗೆ ಆಹ್ವಾನವನ್ನೂ ಮಾಡಿಲ್ಲ. ಅಧ್ಯಕ್ಷರು ಇದ್ದಿದ್ದರೆ ಇದೇ ರೀತಿ ನಡೆದುಕೊಳ್ಳುತ್ತಿರುವಿರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಪಂ ವ್ಯಾಪ್ತಿಗೆ ಬರುವ ಇಲಾಖೆಗಳು ಆಡಳಿತಾಧಿಕಾರಿ ಹೆಸರನ್ನು ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ನಮೂದಿಸಬೇಕು. ಇಲ್ಲವಾದರೆ ನೀವುಗಳು ತಾಲೂಕು ಪಂಚಾಯಿತಿ ಕಾರ್ಯಚಟುವಟಕೆಯಲ್ಲಿ ಇಲ್ಲವೆಂಬ ಸಂದೇಶವನ್ನು ಜನರಿಗೆ ನೀಡಿದಂತಾಗುತ್ತದೆ ಎಂದರು.
ಆಡಳಿತಾಧಿಕಾರಿ ಲತಾ ಇಲಾಖೆವಾರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭ ಶಿಷ್ಟಾಚಾರ ಪಾಲನೆ ಮಾಡದ ಶಿಕ್ಷಣ ಇಲಾಖೆಯ ಅಧಿಕಾರಿ ಗೈರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ ಮಾತನಾಡಿ, ತಾಲೂಕಿನಲ್ಲಿ 18 ಪ್ರಾಥಮಿಕ ಆರೋಗ್ಯಗಳಿದ್ದು, ಈ ಪೈಕಿ ಒಂದು ಪ್ರಾಥಮಿಕ ಕೇಂದ್ರದಲ್ಲಿ ಮಾತ್ರ ಫಾರ್ಮಸಿಸ್ಟ್ ಇದ್ದಾರೆ. ಉಳಿದೆಲ್ಲ ಕಡೆಗಳಲ್ಲಿ ಹುದ್ದೆ ಖಾಲಿಯಿದೆ. ಪುರಸಭೆ ವ್ಯಾಪ್ತಿಯಲ್ಲಿಯೇ ಹೆಚ್ಚು ಡೆಂೆ ಪ್ರಕರಣಗಳು ದಾಖಲಾಗುತ್ತಿದ್ದು, ನಿಯಂತ್ರಿಸಲು ಕ್ರಮವಹಿಸಲಾಗಿದೆ ಎಂದರು.
ಶಿಶು ಅಭಿವೃದ್ಧಿ ಅಧಿಕಾರಿ ಪ್ರದೀಪ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ 2 ತಿಂಗಳಿನಿಂದ ಸಂಬಳವಾಗಿಲ್ಲ. ತಾಲೂಕಿನಲ್ಲಿ ಮೊಟ್ಟೆ ವಿತರಣೆಗೆ ಟೆಂಡರ್ ಕರೆಯಲಾಗಿದ್ದು, ಇಬ್ಬರು ಪಾಲ್ಗೊಂಡಿದ್ದರು.ಇದೀಗ ಇಬ್ಬರೂ ಕೂಡ ತಿರಸ್ಕೃತಗೊಂಡಿದ್ದು, ಮರು ಟೆಂಡರ್ ಕರೆಯಲಾಗಿದೆ ಎಂದರು.
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಕುಮಾರ್ ಮಾತನಾಡಿ, ನವೆಂಬರ್‌ನಿಂದ ಡಿಸೆಂಬರ್‌ವರೆಗೆ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಲಾಗುತ್ತಿದೆ. ಗ್ರಾಮ ಪಂಚಾಯಿತಿ ಹಂತದಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಲು ಕ್ರಮ ವಹಿಸಬೇಕಿದೆ. ಸೊಳ್ಳೆಗಳಿಂದಲೂ ಚರ್ಮಗಂಟು ರೋಗ ಕಂಡು ಬರುತ್ತಿದೆ. ಕಾಲುಬಾಯಿ ಜ್ವರ ಹಿನ್ನೆಲೆಯಲ್ಲಿ 6 ಸಾವಿರ ಲಸಿಕೆ ವಿತರಣೆಯಾಗಿತ್ತು. ಸಂಪೂರ್ಣವಾಗಿ ಲಸಿಕೆ ಹಾಕಲಾಗಿದ್ದು, ಲಸಿಕೆ ಪೂರೈಸುವಂತೆ ಇಲಾಖೆಗೆ ಪತ್ರ ಬರೆಯಲಾಗಿದೆ. ತಾಲೂಕಿನ ಹೊಣಕೆರೆ, ಬೋಗಾದಿ ಹಾಗೂ ದೇವಲಾಪುರ ವ್ಯಾಪ್ತಿಯಲ್ಲಿ ಸಣ್ಣಪ್ರಮಾಣದಲ್ಲಿ ಚರ್ಮಗಂಟು ರೋಗ ಕಂಡುಬಂದಿದ್ದು, ಲಸಿಕೆ ಹಾಕಲಾಗಿದೆ ಎಂದರು.
ಕೆಆರ್‌ಐಡಿಎಲ್ ಇಲಾಖೆ ವಿರುದ್ಧ ಗರಂ: ತಿರುಮಲಾಪುರದಲ್ಲಿ ಪಶು ಆಸ್ಪತ್ರೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕಳೆದ ಬಾರಿ ಸಭೆಯಲ್ಲಿ 10 ದಿನದೊಳಗೆ ಪೂರ್ಣಗೊಳಿಸುವುದಾಗಿ ಹೇಳಿದ್ದ ಕೆಆರ್‌ಐಡಿಎಲ್ ಇಂಜಿನಿಯರ್ 2 ತಿಂಗಳಾದರೂ ಪೂರ್ಣಗೊಳಿಸದಿರುವುದಕ್ಕೆ ಇಒ ಹಾಗೂ ಆಡಳಿತಾಧಿಕಾರಿ ಗರಂ ಆದರು.
ಸಭೆಗೆ ತಿಂಗಳಿಗೊಬ್ಬರು ಬರುತ್ತೀರಿ. ಒಬ್ಬರೂ ಸರಿಯಾಗಿ ಕೆಲಸ ಮಾಡಲ್ಲ. ನಿಮ್ಮ ಇಲಾಖೆಯೇ ಬೇಜವಾಬ್ದಾರಿ. ತಾ.ಪಂ.ಗೆ ಸೇರಿದ ಕಾಮಗಾರಿಗೆ 7 ಲಕ್ಷ ರೂ.ಅನುದಾನ ನೀಡಿ 7 ವರ್ಷ ಕಳೆದರೂ ಇದುವರೆಗೂ ಕಾಮಗಾರಿಯಾಗಿಲ್ಲ. ಮುಂದಿನ 10 ದಿನದೊಳಗೆ ಪಶು ಆಸ್ಪತ್ರೆಯ ಕಾಮಗಾರಿ ಪೂರ್ಣಗೊಳಿಸದಿದ್ದರೆ ನಿಮ್ಮ ವಿರುದ್ಧ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಇಒ ಮತ್ತು ಆಡಳಿತಾಧಿಕಾರಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಆಹಾರ ಇಲಾಖೆ, ಸಾಮಾಜಿಕ ಅರಣ್ಯ ಸೇರಿದಂತೆ ಮುಂತಾದ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.