ಶಿವಾಜಿ ತತ್ವಾದರ್ಶಗಳು ಎಲ್ಲ ಕಾಲಕ್ಕೂ ಮಾದರಿ: ತಾಪಂ ಅಧ್ಯಕ್ಷ ರಾಮಸ್ವಾಮಿ ಅಭಿಪ್ರಾಯ

19CBP3
Published on

ಚಿಕ್ಕಬಳ್ಳಾಪುರ : ಛತ್ರಪತಿ ಶಿವಾಜಿ ಆಡಳಿತ ವೈಖರಿ ಎಲ್ಲ ಕಾಲಕ್ಕೂ ಮಾದರಿಯಾದದ್ದು ಎಂದು ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ,ಶಿವಾಜಿ ಮಹಾನ್ ವ್ಯಕ್ತಿ. ಸಮಾನತೆ, ಸಹಿಷ್ಣುತೆ, ಸೌಹಾರ್ದತೆಯ ತತ್ವಗಳನ್ನೊಳಗೊಂಡ ಉತ್ತಮ ಆಡಳಿತದ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದು ಇವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಆದರ್ಶ ತತ್ವಗಳನ್ನು ರೂಢಿಸಿಕೊಳ್ಳಬೇಕು ಎಂದರು.

ತಹಸೀಲ್ದಾರ್ ಕೆ.ನರಸಿಂಹಮೂರ್ತಿ ಮಾತನಾಡಿ, ಶಿವಾಜಿ ಆಡಳಿತದಾವಧಿಯಲ್ಲಿ ಜಮೀನ್ದಾರಿ ಪದ್ಧತಿಯನ್ನು ತೆಗೆದು ರೈತರಿಗೆ ಸ್ವತಂತ್ರವಾಗಿ ವ್ಯವಸಾಯ ಕೈಗೊಳ್ಳಲು ಅವಕಾಶ ನೀಡಲಾಯಿತು. ಸ್ತ್ರೀಯರಿಗೆ ಹೆಚ್ಚಿನ ಗೌರವ, ಅಮಾಯಕ ಜನರ ರಕ್ಷಣೆ ಮೂಲಕ ಗಮನ ಸೆಳೆದಿದ್ದ ಶಿವಾಜಿ ಛತ್ರಪತಿಯಾಗಿ ಬೆಳೆಯಲು ಅವರ ತಾಯಿ ಜೀಜಾಭಾಯಿ ಮಾರ್ಗದರ್ಶನವೇ ಪ್ರಮುಖ ಕಾರಣ. ಇದನ್ನರಿತು ತಾಯಂದಿರು ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಬೇಕು ಎಂದು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಇತಿಹಾಸ ಪ್ರಾಧ್ಯಾಪಕ ರಂಗನಾಥ್ ಮಾತನಾಡಿ, ಶಿವಾಜಿ ಯಾವುದೇ ಭೇದವಿಲ್ಲದೇ ಎಲ್ಲರ ಹಿತವನ್ನು ಕಾಪಾಡುವ ಪ್ರಜಾಪತಿಯಾಗಿದ್ದರು. ಭಾರತೀಯ ಸಂಸ್ಕೃತಿ, ಕಲೆ, ಪರಂಪರೆ ಮತ್ತು ಮೌಲ್ಯಗಳನ್ನು ಮನೆ ಮನೆಗಳಿಗೆ ತಲುಪಿಸಲು ಶ್ರಮಿಸಿದ್ದು ಇವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಹೇಳಿದರು.ಎಸ್ಸೆಸ್ಸೆಲ್ಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net