

ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿ ಗ್ರಾಮದ ಕಟ್ಟೆ ಬಸವೇಶ್ವರ (ಕಲ್ಲೇಶ್ವರ) ದೇವಸ್ಥಾನದಲ್ಲಿನ ಶಿವಲಿಂಗಕ್ಕೆ ಭಾನುವಾರ ಸೂರ್ಯರಶ್ಮಿ ಸ್ಪರ್ಶಿಸಿತು.
ಪ್ರತಿ ವರ್ಷ ಯುಗಾದಿ ಅಮಾವಾಸ್ಯೆ ಅಥವಾ ಪಾಡ್ಯ ದಿನ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸುತ್ತದೆ. ಈ ವರ್ಷ ಬೆಳಗ್ಗೆ 7 ಗಂಟೆ 5 ನಿಮಿಷಕ್ಕೆ ಸೂರ್ಯ ರಶ್ಮಿ ಲಿಂಗವನ್ನು ಸ್ಪರ್ಶಿಸಿತು. ಬಳಿಕ ಭಕ್ತರು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಪುರಾತನ ದೇವಸ್ಥಾನವನ್ನು ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಗಿದೆ.
ತಾಲೂಕಿನಲ್ಲಿ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಜನರು ಮನೆಗಳಲ್ಲಿ ಬೇವು-ಬೆಲ್ಲದ ಖಾದ್ಯ ಸೇರಿದಂತೆ ವಿವಿಧ ಬಗೆಯ ಅಡುಗೆ ಮಾಡಿ ಪರಸ್ಪರ ಹಂಚಿಕೊಂಡರು. ತಾಲೂಕಿನ ಪುಣ್ಯ ಕ್ಷೇತ್ರಗಳಲ್ಲಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರೈತರು ಜಮೀನುಗಳಲ್ಲಿ ಕೃಷಿ ಪರಿಕರಗಳನ್ನು ಪೂಜಿಸಿದರು. ಹೊಳಗುಂದಿ ಗ್ರಾಮದಲ್ಲಿ ಬ್ಯಾಟಿ ಗಿಡ ಆಚರಿಸಲಾಯಿತು. ಪೂರ್ವ ಕಾಲ್ವಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ರಥೋತ್ಸವ ಜರುಗಿತು. ವಿವಿಧ ಗ್ರಾಮಗಳಲ್ಲಿ ಜನರು ಬಣ್ಣದಾಟ ಆಡಿದರು.