

ಹಾಸನ : ನಗರದ ತಣ್ಣಿರುಹಳ್ಳ ಮಠದ ಶ್ರೀ ಶಿವಲಿಂಗ ಸ್ವಾಮೀಜಿ ಈ ನಾಡು ಕಂಡ ಮಹಾಚೇತನ, ಯೋಗಪುರುಷರಾಗಿದ್ದು ಅವರ ಆದರ್ಶದ ಬದುಕು ಎಲ್ಲರಿಗೂ ಮಾರ್ಗದರ್ಶನವಿದ್ದಂತೆ ಎಂದು ಕೊಡಗು ಕನ್ನಡ ಮಠ ಹಾಗೂ ಬೆಟ್ಟದಪುರ ಮಠ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ತಣ್ಣಿರುಹಳ್ಳ ಮಠದ ಶ್ರೀ ಶಿವಲಿಂಗ ಸ್ವಾಮೀಜಿಯ 14ನೇ ವರ್ಷದ ಗಣಾರಾಧನೆ ಮಹೋತ್ಸವ ಹಾಗು ತಣ್ಣಿರುಹಳ್ಳ ಮಠದ ಹಳೇ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ಶ್ರೀ ಶಿವಲಿಂಗ ಸ್ವಾಮೀಜಿ ಧರ್ಮದ ರಹಸ್ಯವನ್ನು ಮನಗಂಡು ಅದನ್ನು ಸಾರ್ಥಕ ರೀತಿಯಲ್ಲಿ ಸಮಾಜ ಕಾರ್ಯಕ್ರಮಗಳಲ್ಲಿ ಅನುಷ್ಠಾನ ಗೊಳಿಸಿವ ಮೂಲಕ ಬಹುದೊಡ್ಡ ಸಾಧನೆ ಮಾಡಿದ್ದಾರೆ ಎಂದರು.
ಮಾನವ ಜನ್ಮ ಭಗವಂತನ ಕೊಡಿಗೆ. ಮನುಷ್ಯ ಜನ್ಮದ ಮುಖಾಂತರ ಮುಕ್ತಿಯೆಡೆಗೆ ಸಾಗಬೇಕು ಎನ್ನುವುದು ಶಾಸ್ತ್ರಸಮ್ಮತವಾದ ಮಾತು. ಅಂತಹ ಜನ್ಮ ನಮಗೆ ದೊರೆತಿದೆ. ನಮ್ಮನ್ನು ನಾವು ಅರಿತು ಬದುಕನ್ನು ನಡೆಸಿದರೆ ಈ ಮಾಯಾ ಜಗತ್ತಿನಿಂದ ಬಿಡುಗಡೆ ಹೊಂದುವುದು ಸುಲಭ. ಆದರೆ, ಮನುಷ್ಯ ತಾನು ಭೂಮಿಗೆ ಬಂದಿರುವ ಕಾರಣ ಮರೆತು, ಭೂಮಿ ಮೇಲೆ ಶಾಶ್ವತವಾಗಿ ಇರುತ್ತೇನೆಂದುಕೊಂಡು ಮಾಡಬಾರದ ಕೆಲಸ ಮಾಡುತ್ತಿದ್ದಾನೆ ಏಂದು ವಿಷಾದ ವ್ಯಕ್ತಪಡಿಸಿದರು,
ನಾವು ಬಂದಿರುವುದು ಎಷ್ಟು ಸತ್ಯವೋ, ಹೋಗಲೇಬೇಕಾದ್ದೂ ಅಷ್ಟೇ ಸತ್ಯ. ಇಂದು ಇರಬಹುದು, ನಾಳೆ ಹೋಗಲೇಬೇಕು. ಹುಟ್ಟಿದ ಮನುಷ್ಯನಿಗೆ ಸಾವು ಎಂಬ ಅಗಲಿಕೆ ಒಂದಲ್ಲ ಒಂದು ದಿನ ಬರುತ್ತದೆ. ಈ ನಿಟ್ಟಿನಲ್ಲಿ ತಾನು ಇಳೆಗೆ ಬಂದಿರುವ ಕಾರಣವನ್ನೊಮ್ಮೆ ಅತ್ಮವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಹಾಸನ ತಣ್ಣಿರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ ಮಾತನಾಡಿ, ಬೆಳಗಲೆಂದು ಅವತರಿಸಿ ಬಂದ ನಮ್ಮ ಪರಮಪೂಜ್ಯ ಗುರುವರ್ಯರು ನಮ್ಮಂತಹ ಅನೇಕ ಶಿಷ್ಯ ವೃಂದಕ್ಕೆ ಸಾತ್ವಿಕ ಸಂಸ್ಕಾರ ದೀಕ್ಷೆ ನೀಡಿ ಪ್ರಜ್ವಲಿಸುವ ಸನಾತನ ಧರ್ಮ ಜ್ಯೋತಿಯಾಗುವಂತೆ ಪ್ರೇರೇಪಿಸಿ ಆಶೀರ್ವದಿಸಿದ್ದಾರೆ ಎಂದು ಸ್ಮರಿಸಿದರು.
ವಿವಿಧ ಮಠಗಳ ಸ್ವಾಮೀಜಿಗಳು, ತಣ್ಣೀರುಹಳ್ಳ ಮಠದ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು ಐಸ್ವಾಮಿಗೌಡರು, ಪ್ರಧಾನ ಕಾರ್ಯದರ್ಶಿ ಬಿ.ಪಿ.ಸೋಮಣ್ಣ, ಸದಸ್ಯರಾದ ಬಿ.ಎಸ್. ಕಾಂತರಾಜು, ಸಂಘಮೇಶ್, ಬಿ.ರೇಣುಕಾಪ್ರಸಾದ್, ಎಸ್.ಎಸ್.ರವೀಂದ್ರ, ವಕೀಲರು ರೇಣುಕಾ ಪ್ರಸಾದ್, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಸೋಮೇಶ್ ಇದ್ದರು.