

ಕಡೂರು: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶ್ರೀ ಕ್ಷೇತ್ರನಾಥ ಸ್ಮಶಾನ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ಫೆ.26ರಂದು ನಡೆಯಲಿರುವ ಮಹಾಶಿವಾರಾತ್ರಿ ಹಾಗೂ 22ನೇ ವಾರ್ಷಿಕೋತ್ಸವ ಅಂಗವಾಗಿ ಹೊರೆಕಾಣಿಕೆ ಸಂಗ್ರಹಿಸಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಶಂಕರ್ ಪವಾರ್ ತಿಳಿಸಿದರು.
ವಿವಿಧ ಬಡಾವಣೆಗಳಲ್ಲಿ ಎರಡು ದಿನಗಳಿಂದ ಹೊರೆಕಾಣಿಕೆಯ ವಾಹನ ಮನೆ ಮನೆಗಳಿಗೆ ತೆರಳಿ ಸಂಗ್ರಹ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರನಾಥ ಚಂದ್ರಮೌಳೇಶ್ವರ ಸ್ವಾಮಿಗೆ ಅದ್ದೂರಿಯಾಗಿ ಶಿವರಾತ್ರಿ ಪೂಜೆ ನೆರವೇರಲಿದೆ. ಹಿಂದಿನಂತೆ ಹೊರೆಕಾಣಿಕೆ ಸಂಗ್ರಹಿಸಲಾಗುತ್ತಿದೆ. ಭಕ್ತರು ಅಕ್ಕಿ, ಬೆಲ್ಲ, ತೆಂಗಿನಕಾಯಿ, ಬೇಳೆ, ಎಣ್ಣೆ, ಕಾಣಿಕೆ ಮತ್ತಿತರ ವಸ್ತುಗಳನ್ನು ನೀಡುತ್ತಿದ್ದು, ಇದನ್ನು ಅನ್ನದಾಸೋಹಕ್ಕೆ ಬಳಸಲಾಗುವುದು. ಪಟ್ಟಣದ ಇತರ ಬಡಾವಣೆಗಳಲ್ಲಿ ಹೊರೆಕಾಣಿಕೆ ತಲುಪಿಸಲು ಸಾಧ್ಯವಾಗದೆ ಇದ್ದವರು ದೇವಸ್ಥಾನಕ್ಕೆ ತಲುಪಿಸಬಹುದಾಗಿದೆ ಎಂದು ತಿಳಿಸಿದರು.
ಫೆ.26ರ ಬೆಳಗ್ಗೆ 6 ರಿಂದ 27ರ ಬೆಳಗಿನಜಾವ 4.30ರವರೆಗೆ 108 ಏಕ ಶತರುದ್ರಾಭಿಷೇಕ, ರುದ್ರಹೋಮ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 6 ಗಂಟೆಗೆ ಭಜನೆ, ಭರತನಾಟ್ಯ, ಸುಗಮ ಸಂಗೀತ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ದೇವಾಲಯ ಸಮಿತಿಯ ಕೆ.ಎಚ್.ಎ.ಪ್ರಸನ್ನ, ಕೆ.ಜಿ.ಸುರೇಶ್, ಚರುಮುರಿ ಶಿವು, ಆನಂದಯ್ಯ ಸೇರಿದಂತೆ ಅನೇಕರು ಹೊರೆಕಾಣಿಕೆ ಸಂಗ್ರಹದಲ್ಲಿ ಭಾಗವಹಿಸಿದ್ದರು.