ಶಿವರಾತ್ರಿ ಜಾಗರಣೆಗೆ ತೆರಳುತ್ತಿದ್ದ ಇಬ್ಬರ ಸಾವು

Published on

ಪಾವಗಡ: ತಾಲೂಕಿನ ಕಸಬಾ ಹೋಬಳಿಯ ದೊಮ್ಮತಮರಿ ಗ್ರಾಮದ ಪೆಟ್ರೋಲ್​ ಬಂಕ್​ ಸಮೀಪ ಬೈಕ್​ ಮತ್ತು ಗೂಡ್ಸ್​ ಆಟೋ ಮಧ್ಯೆ ಬುಧವಾರ ತಡರಾತ್ರಿ ಅಪಘಾತ ಸಂಭವಿಸಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ಆಂಧ್ರ ಮೂಲದ ರೆಡ್ಡಿಪಲ್ಲಿ ಗ್ರಾಮದ ಚರಣ್​(18) ಸ್ಥಳದಲ್ಲೇ ಮೃತಪಟ್ಟರೆ, ತಿರುಮಲೇಶ್​ (22) ಆಂಧ್ರದ ಆಸ್ಪತ್ರಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಭರತ್​ (20) ಗಂಭೀರ ಗಾಯಗೊಂಡಿದ್ದು, ಹಿಂದೂಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ರಾತ್ರಿ ಲೇಪಾಕ್ಷಿಗೆ ಶಿವರಾತ್ರಿಯ ಜಾಗರಣೆಗೆಂದು ಆಂಧ್ರದ ರೆಡ್ಡಿ ಪಲ್ಲಿಯಿಂದ ಬೈಕ್​ನಲ್ಲಿ ಮೂವರು ಸ್ನೇಹಿತರು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದ ಬಳಿ ಮೃತ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಪಾವಗಡ ಪೊಲೀಸ್​ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಪಿಐ ಸುರೇಶ್​ ಸ್ಥಳ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net