ಶಿವರಾಂ ಅವರನ್ನು ಪಕ್ಷ ಉಚ್ಚಾಟಿಸಲಿ:ಕೆಪಿಸಿಸಿ ಸದಸ್ಯ ವಿನಯ್ ಗಾಂಧಿ ಆಗ್ರಹ

ಶಿವರಾಂ ಅವರನ್ನು ಪಕ್ಷ ಉಚ್ಚಾಟಿಸಲಿ:ಕೆಪಿಸಿಸಿ ಸದಸ್ಯ ವಿನಯ್ ಗಾಂಧಿ ಆಗ್ರಹ
Published on

ಹಾಸನ: ಬಿ ಶಿವರಾಂ ಅವರು ಹಿಂದಿನಿಂದಲೂ ಕೂಡ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ತೊಂದರೆ ನೀಡುತ್ತಾ ಬಂದಿದ್ದಾರೆ. ಈಗಲೂ ಕೂಡ ಅವರು ಸರ್ಕಾರದ ವಿರುದ್ಧ, ಸಚಿವರು ಮತ್ತು ಶಾಸಕರ ವಿರುದ್ಧ ಮಾತನಾಡುತ್ತಿದ್ದಾರೆ. ಇವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಕೆಪಿಸಿಸಿ ಸದಸ್ಯ ವಿನಯ್ ಗಾಂಧಿ ಒತ್ತಾಯಿಸಿದರು.
ಶಿವರಾಂ ಅವರು ಕಾಂಗ್ರೆಸ್ ಪಕ್ಷ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಒಮ್ಮೆ ಮಂತ್ರಿಯನ್ನಾಗಿ ಮತ್ತು ಇನ್ನೂ ನಾಲ್ಕು ಬಾರಿ ಟಿಕೆಟ್ ನೀಡಿದೆ. ಆದರೆ ಇವರು ಪಕ್ಷ ಸಂಘಟನೆ ಮಾಡುವುದನ್ನು ಬಿಟ್ಟು ವಿನಾಃಕಾರಣ ಪಕ್ಷದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಅವರಿಗೆ ಅಧಿಕಾರ ಸಿಕ್ಕ ಸಂದರ್ಭದಲ್ಲಿ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಇಂತಹವರಿಗೆ ನಮ್ಮ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಇವರು ಬೇಲೂರಿನಲ್ಲಿ ಕಾಫಿ ಬೋರ್ಡ್ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಇವರನ್ನು ಜಿಲ್ಲಾ ಪಂಚಾಯತಿ ಅಭ್ಯರ್ಥಿಯನ್ನಾಗಿ ಮಾಡಿ ಪಕ್ಷಕ್ಕೆ ಕರೆತಂದವರು ಎಚ್.ಎನ್. ನಂಜೇಗೌಡರು. ನಂತರ ಎಲ್ಲಾ ಅಧಿಕಾರಗಳನ್ನು ಬಳಸಿಕೊಂಡ ಇವರು ನಮ್ಮ ಪಕ್ಷದ ವಿರುದ್ಧ ಮಾತನಾಡುವಷ್ಟು ದೊಡ್ಡವರಲ್ಲ ಎಂದು ಟೀಕಿಸಿದರು.
ಶಿವರಾಂ ಅವರು ಜಿಲ್ಲೆಯ ಜನರಿಗೆ ಏನು ಅನುಕೂಲ ಮಾಡಿದ್ದಾರೆ ಎಂಬುದನ್ನು ತಿಳಿಯಬೇಕು. ಇವರಿಂದ ಪಕ್ಷಕ್ಕೆ ಸಾಕಷ್ಟು ಅನಾನುಕೂಲವಾಗಿದೆ. ಹೊಳೆನರಸಿಪುರದ ಅನುಪಮಾ ಮತ್ತು ದಿವಂಗತ ರುದ್ರೇಶ್‌ಗೌಡ ಪತ್ನಿ ಅವರಿಗೂ ಕೂಡ ಮೋಸ ಮಾಡಿದರು. ಅವರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರ ಸೋಲಿಗೆ ಕಾರಣಕರ್ತರಾದವರು ಇವರು. ಜೆಡಿಎಸ್- ಎಎಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಇಲ್ಲ ಇವರೇ ಪಕ್ಷ ಬಿಟ್ಟು ಹೋಗಲಿ ಅಥವಾ ಪಕ್ಷವೇ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net