

ಅಥಣಿ: ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಗಚ್ಚಿನಮಠ ಸರ್ವಧರ್ಮಿಯರ ಪವಿತ್ರ ಧಾರ್ಮಿಕ ಕ್ಷೇತ್ರವಾಗಿ ನಾಡಿಗೆ ಮಾದರಿಯಾಗಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಗಚ್ಚಿನಮಠದ ಮುರುಘೇಂದ್ರ ಶಿವಯೋಗಿಗಳ ೧೦೪ನೇ ಜಾತ್ರಾ ಮಹೋತ್ಸವ ಮತ್ತು ಲಿಂ.ಚನ್ನಬಸವ ಸ್ವಾಮೀಜಿ ೪೫ನೇ ಸ್ಮರಣೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಚ್ಚಿನಮಠದ ಚಿಗರಹಳ್ಳಿಯ ಸಿದ್ದಬಸವ ಕಬೀರ ಸ್ವಾಮೀಜಿ, ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಗಚ್ಚಿನಮಠವು ಭಕ್ತರ ಶ್ರದ್ಧಾ ಕೇಂದ್ರವಾಗಿದೆ ಎಂದರು.
ಬೆಳಗ್ಗೆ ಶಿವಯೋಗಿಗಳ ಕರ್ತೃ ಗದ್ದುಗೆಗೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಬಾಲಶಿವಯೋಗಿಗಳ ಪಲ್ಲಕ್ಕಿ ಉತ್ಸವ, ಹಸ್ತಪ್ರತಿಗಳ ಭವ್ಯ ಮೆರವಣಿಗೆ ಹಾಗೂ ಬಸವಣ್ಣನವರ ವಚನ ಸಂಪುಟದ ಮೆರವಣಿಗೆ ಜರುಗಿತು.
ಬಾಡಗಿ ಮಲ್ಲಿಕಾರ್ಜುನ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಮರುಳಸಿದ್ದ ಸ್ವಾಮೀಜಿ, ಪ್ರಭುಕುಮಾರ ಸ್ವಾಮೀಜಿ, ತೆಲಸಂಗದ ವೀರೇಶ್ವರ ದೇವರು ಇತರರಿದ್ದರು.