ಶಿವಯೋಗ ಸಾಧನೆ ಮಾಡಿದ್ದ ಉಜ್ಜಿನಿ ಜಗದ್ಗುರುಗಳು

17 SIRAGUPPA 03
Published on

ಸಿರಗುಪ್ಪ: ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಉಜ್ಜಿನಿ ಸದ್ಧರ್ಮ ಪೀಠದ ಪರಮತಪಸ್ವಿಗಳಾದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು ವೀರಶೈವ ಲಿಂಗಾಯತ ಸಂಸ್ಕೃತಿಯನ್ನು ಬೆಳೆಸಿ ಬಲಗೊಳಿಸಿದ ಪರಮಾಚಾರ್ಯರಾಗಿದ್ದಾರೆ ಎಂದು ಪಟ್ಟಣದ ಬಸವ ಭೂಷಣ ಸ್ವಾಮೀಜಿ ಬಣ್ಣಿಸಿದರು.

ನಾಗರಹಾಳು ಗ್ರಾಮದ ಪಂಡಿತ ದೊಡ್ಡಯ್ಯ ಶಾಸ್ತ್ರಿಗಳ ಬೃಹನ್ಮಠದಲ್ಲಿ ಶುಕ್ರವಾರ ಉಜ್ಜಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರ 89ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿವಯೋಗ ಸಾಧನೆ ಮಾಡಿರುವ ಕೀರ್ತಿ ಸಿದ್ಧಲಿಂಗ ಶ್ರೀಗಳಿಗೆ ಸಲ್ಲುತ್ತದೆ ಎಂದರು.

ಗಡಿನಾಡ ಸಾಹಿತಿ ನಾ.ಮ. ಮರುಳಾರಾಧ್ಯ, ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರ ಕುರಿತು ಉಪನ್ಯಾಸ ನೀಡಿ, ಸಿದ್ದಲಿಂಗ ಶ್ರೀಗಳು ಬಳ್ಳಾರಿಯಲ್ಲಿ 1916ರಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಶಿವಯೋಗಮಂದಿರ ಸ್ಥಾಪನೆಗೆ ತಲಾ ಐದು ಸಾವಿರ ರೂ. ದೇಣಿಗೆ ನೀಡಿದ್ದರು. ಆ ಸಂಸ್ಥೆಗಳು ಇದೀಗ ಹೆಮ್ಮರವಾಗಿ ಬೆಳೆದಿವೆ. ನಾಡಿನ ವಿವಿಧೆಡೆ ಸಂಚರಿಸಿದ ಶ್ರೀಗಳು ಗುರುವಿರಕ್ತರ ಸಮನ್ವಯಕ್ಕೂ ಸಾಕ್ಷಿಯಾಗಿದ್ದರು ಎಂದರು.

ಜಗದೀಶ ಗವಾಯಿ ವಚನ ಗಾಯನ ಪ್ರಸ್ತುತಪಡಿಸಿದರು. ಸಂತೆಕೂಡ್ಲೂರು ಅಂಬಣ್ಣ ತಬಲ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net