

ಬಸವಕಲ್ಯಾಣ: ಶಿವಯೋಗ ಸರ್ವಶ್ರೇಷ್ಠ ಯೋಗ. ಇದು ಎಲ್ಲ ಯೋಗಗಳಿಗೂ ಸಮನ್ವಯ ಯೋಗ ಎಂದು ಉಳವಿಯ ಬಸವ ಧಾಮದ ಶ್ರೀ ಚನ್ನಬಸವ ಸ್ವಾಮೀಜಿ ನುಡಿದರು.
ನಗರದಲ್ಲಿ ಬಸವ ಮಹಾಮನೆ ಟ್ರಸ್ಟ್ ವತಿಯಿಂದ ಬಸವ ಮಹಾಮನೆ ಪರಿಸರದಲ್ಲಿ ಆಯೋಜಿಸಲಾಗಿರುವ ಅನುಭವ ಮಂಟಪ ಸಂಸತ್ತು ೭ನೇ ಅಧಿವೇಶನದ ಎರಡನೇ ದಿನವಾದ ಶನಿವಾರ ಷಟಸ್ಥಲ ಒಂದು ವಿಜ್ಞಾನ. ಭಕ್ತ, ಮಹೇಶ, ಪ್ರಸಾದಿ ಸ್ಥಲ ಸ್ವರೂಪ ಕುರಿತು ಶ್ರೀಗಳು ವಚನಾಧಾರಿತ ವಿಶ್ಲೇಷಣಾತ್ಮಕವಾಗಿ ವಿಷಯ ಮಂಡಿಸಿದರು.
ದೇಹವನ್ನು ಲಿಂಗಮಯವನ್ನಾಗಿ ಮಾಡಿಕೊಂಡಿದ್ದ ಶರಣರು ವಿಜ್ಞಾನಕ್ಕೂ ಹೇಳಲಾಗದ ನಿಗೂಢ ಸತ್ಯಯವನ್ನು ಅಂದು ಶರಣರು ಶಿವಯೋಗದಲ್ಲಿ ಕಂಡುಕೊಂಡಿದ್ದರು. ಲಿಂಗಾಂಗ ಸಮರಸದಿಂದ ಶೂನ್ಯತ್ವ ಪ್ರಾಪ್ತಿಯಾಗುತ್ತದೆ. ಭವಿ ಭಕ್ತನಾಗಬೇಕಾದರೆ ಸರಿಯಾದ ಜ್ಞಾನ ಪಡೆಯಬೇಕಾಗುತ್ತದೆ. ಇದಕ್ಕೆ ಸಮರ್ಥ ಗುರುವಿನಿಂದ ದೀಕ್ಷಾ ಸಂಸ್ಕಾರ ಅವಶ್ಯಕ. ಭಕ್ತನಾಗಲು ಗುರು ಕಾರುಣ್ಯ ಬೇಕೆ, ಬೇಕು ಎಂದು ಹೇಳಿದರು.
ಮನಗೂಳಿವಿರಕ್ತ ಮಠದ ಶ್ರೀ ವೀರತಿಶಾನಂದ ಸ್ವಾಮೀಜಿ ಮಾತನಾಡಿ, ಮಾತು ಮೃದುವಾಗಿರಬೇಕು. ಸೇಡು ಭಾವವಿಲ್ಲದೇ ಎಲ್ಲರನ್ನು ಪ್ರೀತಿಯಿಂದ ಕಾಣಬೇಕು. ಒಳ್ಳೆಯದನ್ನು ಮಾತ್ರ ಮನಸಲ್ಲಿ ತುಂಬಿರಬೇಕು. ಅಹಂಕಾರ ಭಾವ ಇರಬಾದರು, ಹಪಹಪಿತನವಿಲ್ಲದೇ ಸಂತೃಪ್ತಿ ಮನೋಭಾವ ಹೊಂದಿರಬೇಕು. ಇದು ಭಕ್ತ, ಮಹೇಶ ಹಾಗೂ ಪ್ರಸಾದಿ ಸ್ಥಳಕ್ಕೆ ಹೋಗುವ ದಾರಿ ಎಂದು ವಚನಗಳನ್ನು ಪ್ರಸ್ತಾಪಿಸಿ ವಿಶ್ಲೇಷಿಸಿದರು.
ಬಸವ ಮಹಾಮನೆ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ ನೇತೃತ್ವ ವಹಿಸಿದ್ದರು. ಟ್ರಸ್ಟ್ನ ಪೂಜ್ಯ ಗಾಯಿತ್ರಿತಾಯಿ ಪ್ರಾಸ್ತಾವಿಕ ಮಾತನಾಡಿ, ಅರಿವಿನ ಜತೆಗೆ ಆಚಾರ ಮುಖ್ಯ. ಶರಣರ ವಚನಗಳನ್ನು ಆರಿಯುವ ಜತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕಿದೆ ಎಂದರು.
ಭಕ್ತಿ, ಮಹೇಶ ಪ್ರಸಾದಿ ಸ್ವರೂಪ ಕುರಿತು ಅಧಿವೇಶನದಲ್ಲಿ ಕೇಳಲಾದ ಹಲವು ಪ್ರಶ್ನೆಗಳಿಗೆ ಶ್ರೀ ಚನ್ನಬಸವ ಸ್ವಾಮೀಜಿ ವಚನಗಳನ್ನು ಪ್ರಸ್ತಾಪಿಸಿ, ಇವುಗಳ ಅರ್ಥವನ್ನು ವ್ಯಾಖ್ಯಾನಿಸಿ ಉತ್ತರ ನೀಡಿದರು.
ಶುಕ್ರವಾರ ಮಧ್ಯಾಹ್ನ ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆದ ಎರಡನೇ ಗೋಷ್ಠಿಯಲ್ಲಿ ವಿಷಯ ಕುರಿತು ಬೆಂಗಳೂರಿನ ಭಾರತಿತಾಯಿ ಅವರು ಅನುಭಾವ ಮಂಡಿಸಿದ್ದರು. ಶನಿವಾರ ಮಧ್ಯಾಹ್ನ ಪ್ರಾಣಲಿಂಗ ಶರಣ ಅಕ್ಯ ವಿಷಯ ಕುರಿತು ಚಿಂತನ ಗೋಷ್ಠಿ ಜರುಗಿತು.