ಶಿವಯೋಗ ಸಂಭ್ರಮ ಅಸಂಖ್ಯ ಪ್ರಮಥರ ಗಣಮೇಳ ಫೆ. 16ಕ್ಕೆ

30 Dwd 2
Published on

ಧಾರವಾಡ: ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಬಸವ ಕೇಂದ್ರಗಳು ಮತ್ತು ಬಸವ ಸಂಘಟನೆಗಳು, ವಿವಿಧ ಧಾರ್ವಿುಕ ಕೇಂದ್ರಗಳು, ಸರ್ವ ಜನಾಂಗದ ಮಠಾಧೀಶರ ಸಹಯೋಗದೊಂದಿಗೆ ‘ಶಿವಯೋಗ ಸಂಭ್ರಮ’ ಅಸಂಖ್ಯ ಪ್ರಮಥರ ಗಣಮೇಳ ಹಾಗೂ ಸರ್ವ ಶರಣರ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಫೆ. 16ರಂದು ಬೆಳಗ್ಗೆ 8ಕ್ಕೆ ಏರ್ಪಡಿಸಲಾಗಿದೆ ಎಂದು ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಪೀಠಾಧ್ಯಕ್ಷ ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಸಮಾವೇಶದ ಕರಪತ್ರ ಹಾಗೂ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಬೆಂಗಳೂರು- ತುಮಕೂರು ನೈಸ್ ರಸ್ತೆ ಪಕ್ಕದ ನಂದಿ ಗ್ರೌಂಡ್ಸ್​ನಲ್ಲಿ ಸಮ್ಮೇಳನ ನಡೆಯಲಿದೆ ಎಂದರು.

ಸತ್ಪುರುಷರು ಸಾಮಾಜಿಕ ಜಾಗೃತಿ ಮೂಡಿಸುತ್ತ ಸರ್ವಾಂಗೀಣ ಅಭಿವೃದ್ಧಿಗೆ ಒತ್ತಾಸೆ ಆಗಿದ್ದಾರೆ. ಮಾನವೀಯ ಮೌಲ್ಯಗಳನ್ನು ಪ್ರಚುರಪಡಿಸಿದ್ದಾರೆ. ಅವರ ಆಶಯ ಮಾನವೀಯ ಸಮಾಜ ಸ್ಥಾಪನೆ ಆಗಬೇಕೆಂಬುದಾಗಿತ್ತು. ಸಮಾಜ ಸುಧಾರಕರು ಆ ಕಾರ್ಯಗಳನ್ನು ಮುಂದುವರಿಸುತ್ತ ಬಂದಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣವರ ನೇತೃತ್ವದಲ್ಲಿ ಅಲ್ಲಮಪ್ರಭುದೇವರ ಅಧ್ಯಕ್ಷತೆಯಲ್ಲಿ ಕಾಯಕ ಸಮಾಜ ಸ್ಥಾಪಿಸಲ್ಪಟ್ಟಿತು. ಜಾತಿ ಮತ್ತು ವರ್ಗರಹಿತ ಸಮಾಜ ಸ್ಥಾಪನೆಯು ಶರಣರ ಮುಖ್ಯ ಉದ್ದೇಶವಾಗಿತ್ತು. ಅಂದು ಮಹಿಳಾ ಹಕ್ಕುಗಳ ಮತ್ತು ಮಾನವ ಹಕ್ಕುಗಳಿಗಾಗಿ ನಡೆದಂತಹ ಹೋರಾಟವೆ ಕಲ್ಯಾಣ ಕ್ರಾಂತಿ ಎಂದರು.

ಬಸವಣ್ಣನವರ ನೇತೃತ್ವದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಂಗಳು ಸಮಾವೇಶ ಗೊಂಡಿದ್ದರೆಂಬುದು ಒಂದು ಇತಿಹಾಸ. 21ನೇ ಶತಮಾನದಲ್ಲಿ ಅಂಥ ಚಾರಿತ್ರಿಕ ಘಟನೆಗೆ ಸಾಕ್ಷಿ ಆಗಬೇಕೆಂಬ ಉದ್ದೇಶದಿಂದ ಫೆ. 16ರಂದು ಶಿವಯೋಗ ಸಂಭ್ರಮ ಎಂಬ ಧ್ಯಾನ ಪರಂಪರೆಯನ್ನು ಸಾಕ್ಷೀಕರಿಸಬೇಕಿದೆ. ಅದೇ ದಿನ ಬೆಳಗ್ಗೆ 11ಕ್ಕೆ ನಡೆಯುವ ಅಸಂಖ್ಯ ಪ್ರಮಥ ಗಣಮೇಳದ ಮೂಲಕ ಅಸಂಖ್ಯಾತರು ಸೇರುವುದರೊಂದಿಗೆ ಹೊಸ ಇತಿಹಾಸ ನಿರ್ಮಾಣ ಮಾಡಬೇಕಿದೆ. ಸುದ್ದಿಗೋಷ್ಠಿಯಲ್ಲಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಶ್ರೀ ಶಾಂತಲಿಂಗ ಸ್ವಾಮೀಜಿ, ಸಾಹಿತಿ ರಂಜಾನ್ ದರ್ಗಾ, ನಾಗರಾಜ ಪಟ್ಟಣಶೆಟ್ಟಿ, ಸಿದ್ದರಾಮಣ್ಣ ನಡಕಟ್ಟಿ, ಬಸವಂತ ತೋಟದ, ಈಶ್ವರ ಸಾಣಿಕೊಪ್ಪ, ಡಿ.ಬಿ. ಲಕಮನಹಳ್ಳಿ, ಇತರರಿದ್ದರು.

ಸಮಾವೇಶ ಯಶಸ್ಸಿಗೆ ಕರೆ: ಮುರುಘೕಂದ್ರ ಬೃಹನ್ಮಠದ ಮೂಲಕ ಸಂಘಟನೆಗಳು ಶ್ರಮಿಸುತ್ತ ಬಂದಿದ್ದು, ನಾಡಿನಾದ್ಯಂತ ಬಸವ ಕೇಂದ್ರಗಳು ಬಸವ ತತ್ತ್ವ ಪ್ರಸಾರ ಮತ್ತು ಪ್ರಯೋಗವನ್ನು ಕಾಯಕ ಎಂಬಂತೆ ನಡೆಸಿಕೊಂಡು ಬಂದಿದ್ದರಿಂದ ಎಲ್ಲೆಡೆ ಬಸವಪ್ರಜ್ಞೆ ಜಾಗ್ರತವಾಗುತ್ತದೆ. ಮಹಾಮನೆ ಶರಣಸಂಗಮ, ಶರಣ ಸಂಸ್ಕೃತಿ ಉತ್ಸವ, ವಚನ ಕಮ್ಮಟ, ಬಸವಶ್ರೀ ಪ್ರಶಸ್ತಿ, ಬಸವತತ್ತ್ವ ಮಹಾವಿದ್ಯಾಲಯ, ಬಸವತತ್ತ್ವ ಸಮಾವೇಶ, ಅಂತಾರಾಷ್ಟ್ರೀಯ ಏಕತಾ ಶರಣ ಮೇಳ ಇತ್ಯಾದಿಗಳಿಂದ ಬಸವ ಕಲ್ಪಿತ ಸಮಸಮಾಜ ರಚನೆಗೆ ಅವಕಾಶ ಮಾಡಿಕೊಡಲಾಗಿದೆ. ಸಮಾರಂಭದಲ್ಲಿ ರಾಜ್ಯ, ರಾಷ್ಟಮಟ್ಟದ ಧಾರ್ವಿುಕ ಮುಖಂಡರು, ಸಂತರು, ಸರ್ವ ಜನಾಂಗದ ಸ್ವಾಮಿಗಳು ಹಾಗೂ ಶಾಖಾಮಠಗಳ ಚರಮೂರ್ತಿಗಳಲ್ಲದೆ ಜನನಾಯಕರು, ಚಿಂತಕರು ಮತ್ತು ಕಲಾವಿದರು ಭಾಗವಹಿಸಲಿದ್ದಾರೆ. ಬಸವ ಭಕ್ತರು, ಬಸವಾಭಿಮಾನಿಗಳು ಹಾಗೂ ಸಮಸ್ತ ಸಮುದಾಯದವರು ಪಾಲ್ಗೊಂಡು ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಮುರುಘಾ ಶರಣರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net