ಶಿವಮೊಗ್ಗದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ: ಗೃಹ ಸಚಿವ ಆರಗ ಜ್ಞಾನೇಂದ್ರ

SKP WEB
Published on

ಶಿಕಾರಿಪುರ: ಬೆಂಗಳೂರಿನಲ್ಲಿ ಮಾತ್ರ ಎಸ್‌ಎಫ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ಇತ್ತು. ಮುಂದೆ ಶಿವಮೊಗ್ಗದಲ್ಲೂ ಒಂದು ಲ್ಯಾಬೋರೋಟರಿ ಸ್ಥಾಪಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ವಸತಿ ಸಮುಚ್ಚಯಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಪರಾಧಿಗಳಿಗೆ ಉಗ್ರ ಶಿಕ್ಷೆಯಾದಾಗ ಮಾತ್ರ ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆ ಆಗಲು ಸಾಧ್ಯ. ಇದಕ್ಕೆ ಅನುಗುಣವಾಗಿ ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಹೊಸ ವಿಧಿ ವಿಜ್ಞಾನ ಪ್ರಯೋಗಾಲಯವನ್ನು ಆರಂಭಿಸಿಸಲಾಗಿದೆ. ಕೇಂದ್ರ ಸರ್ಕಾರದ ಗೃಹ ಇಲಾಖೆಯಿಂದ ರಾಜ್ಯದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ವಿಶ್ವವಿದ್ಯಾಲಯಕ್ಕೆ ಅನುಮತಿ ಕೊಡಲಿರುವುದು ವಿಶೇಷ ಸಂಗತಿಯಾಗಿದೆ. ಇದರ ಜತೆಯಲ್ಲಿ ಇಲಾಖೆಗೆ ಆಧುನಿಕ ಶಸ್ತ್ರಾಸ್ತ್ರ, ವಾಹನ, ಮದ್ದು ಗುಂಡುಗಳು ಸೇರಿದಂತೆ ಇತರ ಅಸ್ತ್ರಗಳನ್ನು ಪೊರೈಸಲಿದೆ ಎಂದು ತಿಳಿಸಿದರು.

ಪಿಎಸ್‌ಐ ನೇಮಕಾತಿ ಹಗರಣವನ್ನು ಸಮಗ್ರವಾಗಿ ತನಿಖೆ ಮಾಡಲಾಗುತ್ತಿದೆ. ನಿಜವಾದ ಅಭ್ಯರ್ಥಿಗಳಿಗೆ ಯಾವ ಕಾರಣಕ್ಕೂ ಅನ್ಯಾಯ ಆಗಬಾರದು. ತಪ್ಪಿತಸ್ಥರಿಗೆ ಶಿಕ್ಷೆ ಆಗುವುದು ಸಹಜ. ಯಾರೂ ಕಾನೂನಿಗಿಂತ ದೊಡ್ಡವರಲ್ಲ ಎಂದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ದೇಶದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರಿದೆ. ಸವಾಲಾಗಿರುವ ಸಾಕಷ್ಟು ಪ್ರಕರಣಗಳನ್ನು ಬೇಧಿಸುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net