

ಶಿವಮೊಗ್ಗ: ಶಿವಮೊಗ್ಗದಲ್ಲಿ ಪದೇಪದೆ ಗಲಭೆ, ದೋಂಬಿಗಳು ಉಂಟಾಗುತ್ತಿರುವುದಕ್ಕೆ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಕೊಳಕು ಬಾಯಿ ಕಾರಣ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ದೂರಿದರು.
ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು ಅತಂತ್ರ ಪರಿಸ್ಥಿತಿ ಉಂಟಾಗಿದೆ. ಈಶ್ವರಪ್ಪ ಅವರಿಂದ ಶಾಂತಿ ಕದಡಿದೆ. ಅವರು ಬಳಸುವ ಕೆಟ್ಟ ಪದಗಳು ಮತ್ತು ಆರೋಗ್ಯಕರವಲ್ಲದ ಟೀಕೆಗಳಿಂದ ಇಡೀ ವ್ಯವಸ್ಥೆಯೇ ಗಬ್ಬು ನಾರುವಂತಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹಿಂದುಗಳನ್ನು ಉಳಿಸಿಕೊಳ್ಳಲು ಬಿಜೆಪಿ ಸರ್ಕಾರಕ್ಕೆ ಶಕ್ತಿ ಇಲ್ಲ. ಸುಮ್ಮನೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಕೊಲೆ ಮಾಡಿದವರನ್ನು ನೇಣಿಗೇರಿಸಿ ಎಂದು ಕಾಂಗ್ರೆಸ್ ಹೇಳುತ್ತಲೇ ಇದೆ. ಆದರೆ ತಮ್ಮ ವೈಫಲ್ಯ ಮುಚ್ಚಿಕೊಳ್ಳುತ್ತಿದೆ. ಅದರಲ್ಲೂ ಈಶ್ವರಪ್ಪ ಅವರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಸಲ್ಲದ ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಶಿವಮೊಗ್ಗದಲ್ಲಿ ಎರಡು ವರ್ಷಗಳ ನಂತರ ಸಂಭ್ರಮದ ಗಣೇಶೋತ್ಸವ ನಡೆಯುತ್ತಿದೆ. ಆ ನಿಟ್ಟಿನಲ್ಲಿ ಯಾವುದೇ ಅಡೆ ತಡೆ ಇಲ್ಲದೇ ಗಣಪತಿ ಹಬ್ಬ ಆಚರಣೆಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕು ಎಂದು ಬೇಳೂರು ಗೋಪಾಲಕೃಷ್ಣ ಮನವಿ ಮಾಡಿದರು.
ಪ್ರಮುಖರಾದ ಜಿ.ಡಿ. ಮಂಜುನಾಥ್, ಆರ್.ರಾಜಶೇಖರ್, ಸಿ.ಎಸ್.ಚಂದ್ರಭೂಪಾಲ್, ಕೆ.ರಂಗನಾಥ್, ರಾಜಕುಮಾರ್, ಚಿನ್ಮಯ್ ಸುದ್ದಿಗೋಷ್ಠಿಯಲ್ಲಿದ್ದರು.