ಶಿವಮೂರ್ತಿ ಶರಣರಿಗೆ ಎನ್‌ಬಿಡಬ್ಲ್ಯು ವಾರೆಂಟ್ ಜಾರಿ

MURUGHASHARANARU NEW NEW
Published on

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಶಿವಮೂರ್ತಿ ಮುರುಘಾ ಶರಣರಿಗೆ ಎರಡನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನು ರಹಿತ ಬಂಧನ (ಎನ್‌ಬಿಡಬ್ಲ್ಯು) ವಾರೆಂಟ್ ಜಾರಿಗೊಳಿಸಿ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.

ಶರಣರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಪೊಲೀಸರಿಗೆ ಮಂಗಳವಾರದವರೆಗೆ ಕಾಲಾವಕಾಶ ನೀಡಿ, ನ್ಯಾಯಾಧೀಶೆ ಬಿ.ಕೆ.ಕೋಮಲಾ ಅವರು ಆದೇಶ ಪ್ರಕಟಿಸಿದರು.

ಶಿವಮೂರ್ತಿ ಶರಣರ ವಿರುದ್ಧ ದಾಖಲಾಗಿರುವ ಮೊದಲ ಪೋಕ್ಸೋ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ ನ. 8ರಂದು ಜಾಮೀನು ನೀಡಿದ್ದು, ಕೆಲ ಷರತ್ತು ವಿಧಿಸಿ ಆದೇಶ ಪ್ರಕಟಿಸಿತ್ತು. 16ರಂದು ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾಗಿ ದಾವಣಗೆರೆ ವಿರಕ್ತ ಮಠದಲ್ಲಿ ತಂಗಿದ್ದರು.

ಮೊದಲ ಪ್ರಕರಣದ ಜಾಮೀನು ಮಂಜೂರು ಬಳಿಕ ಎರಡನೇ ಪ್ರಕರಣಕ್ಕೆ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ವಿಶೇಷ ಸರ್ಕಾರಿ ಅಭಿಯೋಜಕರು ಎರಡನೇ ಪ್ರಕರಣದಲ್ಲಿ ಬಾಡಿ ವಾರೆಂಟ್ ಆದೇಶ ಜಾರಿಗೆ ನ್ಯಾಯಾಲಯಕ್ಕೆ ಕೋರಿದ್ದರು. ಶರಣರ ಪರ ವಕೀಲರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಅವಕಾಶ ಮಾಡಿಕೊಡುವಂತೆ ಕೋರಿಕೆ ಸಲ್ಲಿಸಿದ್ದರು. ಇದಕ್ಕೆ ಸರ್ಕಾರಿ ಅಭಿಯೋಜಕರು ಆಕ್ಷೇಪ ವ್ಯಕ್ತಪಡಿಸಿದ್ದರು.

16ರಂದು ಬೆಳಗ್ಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣಗೆ ಹಾಜರಾಗಿ, ಮಧ್ಯಾಹ್ನ ಬಿಡುಗಡೆಯಾಗಿದ್ದರು. ಹೀಗಾಗಿ ಎನ್‌ಬಿಡಬ್ಲ್ಯು ವಾರೆಂಟ್ ಹೊರಡಿಸುವಂತೆ ಸರ್ಕಾರಿ ಅಭಿಯೋಜಕರು ಕೋರಿಕೆ ಸಲ್ಲಿಸಿದ್ದರು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಆದೇಶ ಪ್ರಕಟಿಸಿದ್ದು, ಬಂಧಿಸಲು ಗ್ರಾಮಾಂತರ ಪೊಲೀಸರು ದಾವಣಗೆರೆಯತ್ತ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net