ಶಿವಬೋಧರಂಗ ಮಠದಲ್ಲಿ ಪೀಠಾರೋಹಣ

31MDLG1A
ಮೂಡಗಿ ಪಟ್ಟಣ ಶಿವಬೋಧರಂಗ ಸ್ವಾಮಿ ಸಿದ್ಧ ಸಂಸ್ಥಾನ ಮಠದಲ್ಲಿ ದತ್ತಾತ್ರೇಯಬೋಧ ಸ್ವಾಮೀಜಿ ಮತ್ತು ಶ್ರೀಧರಬೋಧ ಸ್ವಾಮೀಜಿ ಅವರಿಗೆ ಪೀಠಾರೋಹಣ ದೀಕ್ಷೆಯನ್ನು ಪ್ರದಾನ ಮಾಡಲಾಯಿತು. ಅವಧೂತ ಬೋರಗಾಂವಕರ ಇತರರು ಇದ್ದರು.
Published on

ಮೂಡಲಗಿ: ಮೂಡಲಗಿಯ ಶಿವಬೋಧರಂಗ ಸ್ವಾಮಿ ಸಂಸ್ಥಾನಮಠದಲ್ಲಿ ಶುಕ್ರವಾರ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ ಅವರಿಗೆ ಶ್ರೀಕ್ಷೇತ್ರ ನರಸಿಂಹವಾಡಿಯ ವೇದಮೂರ್ತಿ ಅವಧೂತ ಬೋರಗಾಂವಕರ ಅವರ ನೇತೃತ್ವದಲ್ಲಿ ಪೀಠಾರೋಹಣ ದೀಕ್ಷಾ ಕಾರ್ಯಕ್ರಮವು ಶುಕ್ರವಾರ ವಿಧಿವತ್ತಾಗಿ ನೆರವೇರಿತು.

ಬೆಳಗ್ಗೆ ಕೆಳಗಿನ ಮಠದಲ್ಲಿ ಸನ್ನಿಧಿಗೆ ವಿಶೇಷ ಪೂಜೆಗಳು ನೆರವೇರಿದ ನಂತರ ಮೇಲಿನ ಮಠದಲ್ಲಿ ಸೌರಯಾಗ ಹೋಮದೊಂದಿಗೆೆ ಶ್ರೀಮಠದ ಸಂಪ್ರದಾಯದಂತೆ ಮತ್ತು ವಿವಿಧ ವಿಧಿವಿಧಾನಗಳೊಂದಿಗೆ ಉಭಯ ಶ್ರೀಗಳಿಗೆ ದೀಕ್ಷೆಯನ್ನು ಪ್ರದಾನ ಮಾಡಿದರು.

ದೀಕ್ಷೆ ಸ್ವೀಕರಿಸಿದ ಶ್ರೀಗಳು ಮೇಲಿನ ಮಠದಿಂದ ಕೆಳಗಿನ ಮಠದವರೆಗೆ ಅಲಂಕೃತ ಅಶ್ವದ ಮೇಲೆ ಆಗಮಿಸಿದರು. ಉಭಯ ಶ್ರೀಗಳು ಬರುವ ದಾರಿಯುದ್ದಕ್ಕೂ ಭಕ್ತರು ಪುಷ್ಪ ಸಮರ್ಪಿಸಿದರು. ಕೆಳಗಿನ ಮಠದಲ್ಲಿ ಭಕ್ತರಿಗೆ ದರ್ಶನ ನೀಡಿ ಮಾತನಾಡಿದ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ, ಉಜ್ವಲ ಪರಂಪರೆ ಹೊಂದಿರುವ ಶಿವಬೋಧರಂಗ ಮಠದ ಧಾರ್ಮಿಕ ಆಚರಣೆ ಹಾಗೂ ಸಂಪ್ರದಾಯಗಳನ್ನು ಶ್ರದ್ಧಾ-ಭಕ್ತಿಯಿಂದ ಮುಂದುವರಿಸಿಕೊಂಡು ಹೋಗುವ ಸಂಕಲ್ಪ ನಮ್ಮದಾಗಿದೆ ಎಂದರು. ಪೂಜ್ಯ ತಂದೆಯವರಾದ ಶ್ರೀಪಾದಬೋಧ ಸ್ವಾಮೀಜಿ ಅವರ ಸಂಕಲ್ಪ ಮತ್ತು ಅವರ ನಡೆ, ನುಡಿ ಪಾಲಿಸಿಕೊಂಡು ಶ್ರೀಮಠದ ಭಕ್ತರ ಆಶಯ ಈಡೇರಿಸುವುದು ಮತ್ತು ಸಮಾಜಮುಖಿಯಾಗಿ ಕಾರ್ಯ ಮಾಡುವ ಧ್ಯೇಯ ನಮ್ಮದಾಗಿದೆ ಎಂದರು. ಕೆಳಗಿ ಮಠದಲ್ಲಿ ಅನ್ನಸಂತರ್ಪಣೆ ಜರುಗಿತು. ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ ಅವರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಮತ್ತು ನಿಂಗಪ್ಪ ಕುರಬೇಟ ಸತ್ಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net