ಶಿವನೇ ನಾ ನಿನ್ನ ಸೇವಕನಯ್ಯ..

DSC_6782
Published on


ಕಲಬುರಗಿ: ಶಿವನೇ ನಾ ನಿನ್ನ ಸೇವಕನಯ್ಯ, ಕೈಲಾಸವಾಸ ಗೌರೀಶ ಈಶ, ತೈಲಧಾರೆಯಂತೆ ಭಯವ ಪರಿಹರಿಸಯ್ಯ ಶಂಭೋ.. ಎಂಬ ದಾಸರ ಹಾಡಿನಂತೆ ಮಹಾಶಿವರಾತ್ರಿ ನಿಮಿತ್ತ ಸೋಮವಾರ ನಗರ ಸೇರಿ ಜಿಲ್ಲೆಯ ವಿವಿಧ ಶಿವ ಮಂದಿರಗಳು ಭಕ್ತರಿಂದ ತುಂಬಿ ಹೋಗಿದ್ದವು.
ಎಲ್ಲೆಂದರಲ್ಲಿ ಶಿವ ನಾಮಸ್ಮರಣೆ, ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರ ಕೇಳಿಬರುತ್ತಿತ್ತು. ಶಿವನಿಗೆ ಪ್ರಿಯವಾದ ಡಮರುಗ, ಗಂಟೆ, ಜಾಗಟೆಗಳ ಸದ್ದು ಮೊಳಗಿತ್ತು. ಆಳಂದ ರಸ್ತೆ ರಾಮತೀರ್ಥ ದೇವಸ್ಥಾನದ ಈಶ್ವರ ಲಿಂಗಕ್ಕೆ ನಾನಾ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ನಸುಕಿನ ಜಾವದಿಂದಲೇ ಭಕ್ತರು ದೇಗುಲದತ್ತ ಹೆಜ್ಜೆ ಹಾಕಿ ಸರದಿ ನಿಂತು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಕೃತಾರ್ಥರಾದರು.
ಮಹಾನಗರ ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ಉದ್ದನೆ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಭಕ್ತರಿಗೆ ಬಾಳೆಹಣ್ಣು, ದ್ರಾಕ್ಷಿ ಪ್ರಸಾದ ರೂಪದಲ್ಲಿ ನೀಡಿದರೆ, ರುದ್ರಾಕ್ಷಿ, ವಿಭೂತಿ ಹಾಗೂ ಶಿವನಾಮ ಸ್ಮರಣೆ, ಹನುಮಾನ ದೇವರ ಮಂತ್ರೋಕ್ತಿ ಕುರಿತ ಕಿರುಪುಸ್ತಕ ನೀಡುತ್ತಿರುವುದು ಕಂಡಿತು.
ಸೇಡಂ ರಸ್ತೆ ಗೀತಾನಗರದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಸರೋವರದಲ್ಲಿ 21 ಅಡಿ ಎತ್ತರದ ಮೂರು ಕ್ವಿಂಟಾಲ್ ತೊಗರಿ ಕಾಳಿನಿಂದ ಸಿದ್ಧಪಡಿಸಿದ್ದ ಈಶ್ವರ ಲಿಂಗ ಭಕ್ತರನ್ನು ಆಕರ್ಷಿಸಿತು. ಇಲ್ಲಿ ದ್ವಾದಶ (12) ಜ್ಯೋತಿರ್ಲಿಂಗ ದರ್ಶನ ಪಡೆದ ಭಕ್ತರು ಪುಳಕಿತಗೊಂಡರು. ಭಕ್ತರಿಗೆ ಅನ್ನ ದಾಸೋಹ, ಉಪವಾಸ ಇದ್ದವರಿಗೆ ಹಣ್ಣು ಮತ್ತು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರ್ಶ ನಗರದ ಬ್ರಹ್ಮಕುಮಾರಿ ಈಶ್ವರೀಯ ವಿವಿ ಕೇಂದ್ರದಲ್ಲಿ ಬಿಕೆ ವಿಜಯಾ ಮತ್ತು ಬಿಕೆ ಪ್ರೇಮ್ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮ ಜರುಗಿದವು. ವೈಷ್ಣೋದೇವಿ ಮಂದಿರದಲ್ಲೂ ಶುಕ್ರವಾರ ಭಕ್ತರ ದಂಡು ಕಂಡಿತು. ಸರದಿ ನಿಂತು ದರ್ಶನ ಪಡೆದು ಕೃತಾರ್ಥರಾದರು.
ಗೋದುತಾಯಿ ನಗರದ ಶಿವ ಮಂದಿರದಲ್ಲಿ ಬೆಳಗ್ಗೆಯಿಂದ ರುದ್ರಾಭಿಷೇಕ, ಬಿಲ್ವಾರ್ಚನೆ ಮುಂತಾದ ಕಾರ್ಯಕ್ರಮ ನಡೆಯಿತು. ಸಂಜೆ ಪ್ರಸಾದ ವಿತರಿಸಲಾಯಿತು. ಸೇಡಂ ರಸ್ತೆ ವಿದ್ಯಾನಗರ ಕಾಲನಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದೀಪೋತ್ಸವ ಮತ್ತು ಸಂಗೀತ ಕಾರ್ಯಕ್ರಮ ಜರುಗಿತು.
ಬ್ರಹ್ಮಪುರದ ಭವಾನಿ ಶಂಕರ ದೇವಸ್ಥಾನದಲ್ಲಿ ಅಪಾರ ಭಕ್ತರು ದರ್ಶನ ಪಡೆದರು. ಬಿಲ್ವಾರ್ಚನೆ ಸೇರಿ ರುದ್ರದೇವರಿಗೆ ಪೂಜೆ ಸಲ್ಲಿಸಲಾಯಿತು. ರಾಜಾಪುರದ ಮಲ್ಲಿಕಾರ್ಜುನ ದೇವಸ್ಥಾನ, ಕೈಲಾಸ ನಗರದ ಕೈಲಾಸನಾಥೇಶ್ವರ ದೇವಸ್ಥಾನ, ಸ್ವಾಮಿ ವಿವೇಕಾನಂದ ನಗರದ ಶ್ರೀ ಓಂಕಾರೇಶ್ವರ ಮಂದಿರ, ಜೇವರ್ಗಿ ರಸ್ತೆಯ ಕೃಷ್ಣೇಶ್ವರ, ಎನ್​ಜಿಒ ಕಾಲನಿ ಶಿವ ಮಂದಿರ, ಮಾಕಾ ಲೇಔಟ್ನ ಧ್ಯಾನಾಂಜನೇಯ, ಜೇವರ್ಗಿ ಕಾಲನಿ ಮತ್ತು ಬಿದ್ದಾಪುರ ಕಾಲನಿ ರಾಯರ ಮಠ, ಬ್ರಹ್ಮಪುರ ಉತ್ತರಾದಿ ಮಠದ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಲ್ಲೂ ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net