ಶಿವನಸಮುದ್ರದಲ್ಲಿ ವಿಜೃಂಭಣೆಯ ರಥೋತ್ಸವ

Published on

ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರ ಸಮೂಹ ದೇವಾಲಯದ ಶ್ರೀ ಪ್ರಸನ್ನ ಮೀನಾಕ್ಷಿ ಸಮೇತ ಸೋಮೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಬುಧವಾರ ಅದ್ದೂರಿಯಾಗಿ ನೆರವೇರಿತು.

ದೇವಾಲಯದಲ್ಲಿ ಏಕವಾರ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ, ಯಾಗಶಾಲೆಯಲ್ಲಿ ಶಿವಪೂಜೆ, ಶಿವಯಾಗ, ರಥಪ್ರತಿಷ್ಠೆ, ರಥಯಾನ ನಡೆಸಿ ಮಹಾ ಮಂಗಳಾರತಿ ಮಾಡಲಾಯಿತು. ದೇವಸ್ಥಾನದ ಹೊರಭಾಗದಲ್ಲಿ ಹೂವಿನಿಂದ ಅಲಂಕೃತಗೊಂಡಿದ್ದ ರಥದಲ್ಲಿ ಉತ್ಸವ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸಲಾಯಿತು. ನಂತರ ಶ್ರೀಮೀನಾಕ್ಷಿ ದೇವಿ, ಶ್ರೀಸೋಮೇಶ್ವರ ಸ್ವಾಮಿ, ಗಣಪತಿಸ್ವಾಮಿ ರಥಗಳನ್ನು ದೇವಾಲಯ ರಥದ ಬೀದಿಯಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಎಳೆದರು.

ಈ ವೇಳೆ ಪ್ರತಿ ಮನೆಯಿಂದ ಹಣ್ಣು- ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ನೆರೆದಿದ್ದ ಭಕ್ತರಿಗೆ ಬೆಳಕವಾಡಿ, ಉತ್ತಂಬಳ್ಳಿ, ಮಾಂಬಳ್ಳಿ, ಕೊಳ್ಳೇಗಾಲದ ದೇವಾಂಗ ಜನಾಂಗದವರು ಅನ್ನ ದಾಸೋಹ ನಡೆಸಿದರು. ಪೂಜಾ ಕೈಂಕರ್ಯವನ್ನು ಪ್ರಧಾನ ಅರ್ಚಕ ನಾಗರಾಜು ದೀಕ್ಷಿತ್, ಸ್ಕಂದ ಕುಮಾರ್ ದೀಕ್ಷಿತ್, ಪ್ರಭಾಕರ್ ಅಯ್ಯರ್ ನಡೆಸಿಕೊಟ್ಟರು. ರಥೋತ್ಸವ ಶ್ರೀರಂಗನಾಥಸ್ವಾಮಿ ಸಮೂಹ ದೇವಾಲಯಗಳ ಆಡಳಿತಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ ಮಹೇಶ್ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿ ಸುರೇಶ್ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net