ಶಿವನ ಆರಾಧನೆಯೊಂದಿಗೆ ಶ್ರಾವಣ ಆರಂಭ

Thipperudraswamy Degula
Published on

ಚಿತ್ರದುರ್ಗ: ಶಕ್ತಿದೇವತೆಗಳ ನಾಡೆಂದು ಪ್ರಸಿದ್ಧಿ ಪಡೆದಿರುವ ಕೋಟೆನಗರಿಯೂ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳಿಂದಲೂ ಹೆಸರಾಗಿದೆ. ಈ ಬಾರಿ ಆ. 5ರಂದು ಮಹಾಶಿವನ ಆರಾಧನೆಯೊಂದಿಗೆ ಮಾಸದ ಪೂಜೆಯನ್ನು ಭಕ್ತಿ-ಭಾವದೊಂದಿಗೆ ಸ್ವಾಗತಿಸಲು ಭರದ ಸಿದ್ಧತೆ ಮುಂದುವರೆದಿದೆ.

ಈ ಮಾಸದಲ್ಲಿ ಸಾಮಾನ್ಯವಾಗಿ ಸನ್ನಿಧಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚು. ಅಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳಿಂದ ದರ್ಶನಕ್ಕಾಗಿ ಭಕ್ತರ ದಂಡೆ ಹರಿದು ಬರುವುದುಂಟು. ಹೀಗಾಗಿ ಜಿಲ್ಲಾದ್ಯಂತ ದೇಗುಲಗಳಲ್ಲಿ ಶುಚಿಗೊಳಿಸುವ ಕಾರ್ಯ ಪೂರ್ಣಗೊಂಡಿದ್ದು, ಪೂಜೆಗಾಗಿ ಮನೆಗಳನ್ನು ಸ್ವಚ್ಛಗೊಳಿಸಲಾಗಿದೆ.

ಇಲ್ಲಿನ ನವದುರ್ಗೆಯರು, ಶಿವ, ಗಣಪತಿ, ವೆಂಕಟೇಶ್ವರ, ಆಂಜನೇಯ ಸ್ವಾಮಿ ದೇಗುಲಗಳಲ್ಲಿ ಮಾಸದ ನಿತ್ಯ ಪೂಜೆಗೆ ಈಗಿನಿಂದಲೇ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ಶ್ರಾವಣದ ಮೊದಲ ದಿನ ಶುಕ್ಲ ಪಕ್ಷ ಸೋಮವಾರ ಬಂದಿರುವ ಕಾರಣ ಜಿಲ್ಲೆಯ ಪುಣ್ಯಕ್ಷೇತ್ರ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ, ಮಹಾರುದ್ರನ ಸನ್ನಿಧಿಯಲ್ಲಿ ವಿಶೇಷ ಪೂಜೆ ಜರುಗಲಿವೆ.

ದುರ್ಗದ ರಕ್ಷಕ ದೇವತೆಗಳಾದ ಏಕನಾಥೇಶ್ವರಿ, ರಾಜಮಾತೆ ಉಚ್ಚಂಗಿಯಲ್ಲಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಕಣಿವೆಮಾರಮ್ಮ, ಬರಗೇರಮ್ಮ, ಗೌರಸಂದ್ರ ಮಾರಮ್ಮ, ಚೌಡೇಶ್ವರಿ, ಬನ್ನಿ ಮಹಾಕಾಳಿಕಾಂಬ, ಕುಕ್ಕವಾಡೇಶ್ವರಿ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಅಂತರಘಟ್ಟಮ್ಮ, ಮಲೆನಾಡು ಚೌಡೇಶ್ವರಿ, ದುರ್ಗಾ ಮಾತೆ, ಅನ್ನಪೂರ್ಣೇಶ್ವರಿ, ಚಾಮುಂಡೇಶ್ವರಿ, ಬುಡ್ಡಮ್ಮ, ಮೈಲಮ್ಮ, ಮಾಸ್ತಮ್ಮ ಒಳಗೊಂಡು ಎಲ್ಲ ಶಕ್ತಿದೇವತೆಗಳ ದೇಗುಲಗಳಲ್ಲಿ ವೈವಿಧ್ಯಮಯ ಅಲಂಕಾರ ಸೇವೆ, ಪೂಜೆ ನಡೆಸಲು ಭಕ್ತ ಮಂಡಳಿ ಪೂರ್ವ ಸಿದ್ಧತೆಯಲ್ಲಿ ತೊಡಗಿದೆ.

ಶಿವ ದೇಗುಲಗಳು ಸಜ್ಜು: ಮಹಾರುದ್ರನ ಆರಾಧಕರಿಗೆ ಸೋಮವಾರ ಅತ್ಯಂತ ಶ್ರೇಷ್ಠ ದಿನವಾದ್ದರಿಂದ ಶ್ರಾವಣ ಮಾಸದ ಎಲ್ಲ ಸೋಮವಾರದಂದು ಐತಿಹಾಸಿಕ ದೇಗುಲಗಳಾದ ಹಿಡಂಭೇಶ್ವರ, ಸಂಪಿಗೆ ಸಿದ್ಧೇಶ್ವರ, ಕಾಶಿ ವಿಶ್ವೇಶ್ವರ, ಪಲ್ಗುಣೇಶ್ವರ, ಕರ್ವತೀಶ್ವರ, ಗಾರೆಬಾಗಿಲು ಈಶ್ವರ, ಉಮಾ ಮಹೇಶ್ವರ, ನಗರದಲ್ಲಿನ ನೀಲಕಂಠೇಶ್ವರ, ದೊಡ್ಡಪೇಟೆ ಕಂಬಳಿ ಬೀದಿಯ ಬೀರಗಲ್ಲೇಶ್ವರ, ನಗರೇಶ್ವರ, ಗಾರೇಹಟ್ಟಿಯ ಮಹಾಬಲೇಶ್ವರ ಸೇರಿ ಜಿಲ್ಲೆಯ ಶಿವ ದೇಗುಲಗಳಲ್ಲಿ ಸ್ವಾಮಿಯ ಮೂರ್ತಿಗೆ ಜಲಾಭಿಷೇಕ, ಬಿಲ್ವಾರ್ಚನೆ, ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ ಸೇವೆಗಳು ಜರುಗಲಿವೆ.

ವಿಘ್ನನಿವಾರಕನಿಗೂ ವಿಶೇಷಾಲಂಕಾರ: ಮೇಲುದುರ್ಗದ ಬೆಟ್ಟದ ಗಣಪತಿ, ಮದಕರಿ ಮಹಾಗಣಪತಿ, ಪ್ರಸನ್ನ ಗಣಪತಿ, ಹೊಳಲ್ಕೆರೆ ರಸ್ತೆಯ ಸಂಕಷ್ಟಹರ ಗಣಪತಿ, ಜೆಸಿಆರ್ ಬಡಾವಣೆಯ ಗಣೇಶನ ಸನ್ನಿಧಾನದಲ್ಲೂ ಪ್ರತಿ ಮಂಗಳವಾರ ಮತ್ತು ಬುಧವಾರ ವಿಶೇಷಾಲಂಕಾರದೊಂದಿಗೆ ಪೂಜಾ ಕೈಂಕರ್ಯಗಳು ನೆರವೇರಲಿವೆ.

ತಮಟಕಲ್ಲು ಆಂಜನೇಯ, ಬರಗೇರಿ ಆಂಜನೇಯ, ವೀರಾಂಜನೇಯ, ಕೋಟೆ ಆಂಜನೇಯ, ಕ್ರೀಡಾಂಗಣ ರಸ್ತೆಯ ಆಂಜನೇಯ, ರಕ್ಷಾ ಆಂಜನೇಯ, ತುರುವನೂರು ರಸ್ತೆಯ ವೆಂಕಟರಮಣ ಸ್ವಾಮಿ, ಆನೆಬಾಗಿಲು ವೆಂಕಟೇಶ್ವರ ಸ್ವಾಮಿ, ಉಗ್ರನರಸಿಂಹಸ್ವಾಮಿ, ಲಕ್ಷ್ಮೀನರಸಿಂಹ ಸ್ವಾಮಿ ದೇಗುಲಗಳಲ್ಲೂ ಶನಿವಾರದ ಪೂಜೆಗೆ ಅನೇಕ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ.

ಭಾನುವಾರ ನಾಗರ ಅಮಾವಾಸ್ಯೆಯನ್ನು ಶ್ರದ್ಧಾ-ಭಕ್ತಿಯಿಂದ ಅನೇಕರು ಆಚರಿಸಿದರು. ದೇಗುಲಗಳಿಗೆ ಭೇಟಿ ನೀಡಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಅಲ್ಲದೆ, ಜ್ಯೋತಿರ್ಭೀಮೇಶ್ವರ ವ್ರತಾಚರಣೆಯಲ್ಲೂ ಹಲವರು ತೊಡಗಿದರು.

ಮಂಗಳಗೌರಿ ವ್ರತಾರಂಭ: ಮಂಗಳ ಗೌರಿ, ಶುಕ್ರ ಗೌರಿ, ಸಂಪದ್ ಗೌರಿ ಒಳಗೊಂಡು ಈ ಮಾಸದಲ್ಲಿ ಹಿಂದು ಧರ್ಮದ ಅನೇಕ ಮಹಿಳೆಯರು ವ್ರತಾಚರಣೆ ಮಾಡುವ ಪ್ರತೀತಿ ಇದ್ದು, ಮನೆಗಳಲ್ಲಿನ ದೇವರ ಕೋಣೆ ಶುಚಿಗೊಳಿಸಿಕೊಂಡಿದ್ದು, ಆ. 6ರಿಂದ ಮಂಗಳಗೌರಿ ವ್ರತ ಆರಂಭವಾಗಲಿದೆ.

8ಕ್ಕೆ ಚೌತಿ, 9ಕ್ಕೆ ಪಂಚಮಿ: ಶ್ರಾವಣ ಆರಂಭದಲ್ಲೇ ಬರುವ ನಾಗರಚೌತಿ ಮತ್ತು ನಾಗರ ಪಂಚಮಿ ಹಬ್ಬಕ್ಕೂ ಉಂಡೆಗಳನ್ನು ತಯಾರಿಸಿಟ್ಟುಕೊಳ್ಳಲು ಹಲವರು ಮುಂದಾಗಿದ್ದಾರೆ. ನಗರ ಸೇರಿ ಜಿಲ್ಲಾ ವ್ಯಾಪ್ತಿಯ ನಾಗರಕಟ್ಟೆಗಳು ಹಬ್ಬಕ್ಕೂ ಒಂದೆರಡು ದಿನ ಮುನ್ನ ಸ್ವಚ್ಛಗೊಳ್ಳಲಿದ್ದು, ಸುಣ್ಣ-ಬಣ್ಣದಿಂದ ಕಂಗೊಳಿಸಲಿವೆ. 8ರಂದು ಚೌತಿ, 9ಕ್ಕೆ ಪಂಚಮಿ ಹಬ್ಬ ಆಚರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net