ಶಿವಗಂಗೆಯಲ್ಲಿ ಅಪಾಯಕಾರಿ ಚಾರಣ, ತುಕ್ಕುಹಿಡಿದು ಕಿತ್ತುಬರುತ್ತಿವೆ ರೇಲಿಂಗ್ ಪ್ರವಾಸಿಗರ ಸುರಕ್ಷತೆಗಿಲ್ಲ ಖಾತ್ರಿ, ಜಾರುವ ಬಂಡೆಗಳ ನಡುವೆ ಕಸರತ್ತು

Web 3
Published on

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದ ಚಾರಣ ಅಪಾಯಕಾರಿಯಾಗಿದೆ. ತುಕ್ಕು ಹಿಡಿದ ರೇಲಿಂಗ್‌ಗಳು ಚಾರಣಿಗರ ಪ್ರಾಣಕ್ಕೆ ಕುತ್ತು ತರುತ್ತಿದೆ. ಜಾರುವ ಮಾದರಿಯಲ್ಲಿ ಬಂಡೆಗಳನ್ನು ಹತ್ತಲು ನೆರವಿಗೆ ಬರಬೇಕಾದ ರೇಲಿಂಗ್‌ಗಳೇ ಚಾರಣಿಗರನ್ನು ಅಪಾಯಕ್ಕೆ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚಾರಣಿಗರ ಹಾಟ್ ೆವರಿಟ್ ಎನಿಸಿರುವ ಪ್ರಸಿದ್ಧ ಗಿರಿಧಾಮ ಶಿವಗಂಗೆ ಶಿಖರಕ್ಕೆ ಪ್ರತಿದಿನ ನೂರಾರು ಚಾರಣಿಗರು ಭೇಟಿ ನೀಡುತ್ತಾರೆ, ಸಮುದ್ರಮಟ್ಟಕ್ಕಿಂತ 4,559 ಅಡಿ ಎತ್ತರದ ಬೆಟ್ಟವನ್ನು ಹತ್ತಿ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಲು ಹಾತೊರೆಯುತ್ತಾರೆ. ವಾರಾಂತ್ಯಗಳಲ್ಲಿ ಚಾರಣಿಗರ ದಂಡು ಹರಿದುಬರುತ್ತದೆ. ಆದರೆ ದುರದೃಷ್ಟವೆಂಬಂತೆ ಇಲ್ಲಿ ಚಾರಣಿಗರ ಸುರಕ್ಷತೆಗೆ ಖಾತ್ರಿ ಇಲ್ಲದಂತಾಗಿದೆ.

ತುಕ್ಕು ಹಿಡಿದು ಕಿತ್ತು ಬಂದಿವೆ ರೇಲಿಂಗ್: ಶಿವಗಂಗೆ ಬೆಟ್ಟದ ಪ್ರವೇಶ ದ್ವಾರದಿಂದ ಗಂಗಾಧರೇಶ್ವರ ಸ್ವಾಮಿ ದೇಗುಲದವರೆಗೆ ಉತ್ತಮ ಮೆಟ್ಟಿಲು ಹಾಗೂ ಎರಡು ರೇಲಿಂಗ್ ವ್ಯವಸ್ಥೆ ಇದೆ. ಬಳಿಕ ಬೆಟ್ಟದ ತುದಿವರೆಗೆ ಅಳವಡಿಸಿರುವ ಹಳೇ ರೇಲಿಂಗ್‌ಗಳು ತುಕ್ಕು ಹಿಡಿದಿವೆ. ಎರಡೂ ಬದಿಯ ರೇಲಿಂಗ್‌ಗಳು ಅನೇಕ ಕಡೆಗಳಲ್ಲಿ ಕಿತ್ತಿವೆ. ಕೆಲವು ಕಡೆಗಳಲ್ಲಿ ಇನ್ನೇನು ಕಿತ್ತು ಬರುವ ದುಸ್ಥಿತಿಯಲ್ಲಿವೆ. ಹಳೇ ರೇಲಿಂಗ್‌ಗಳ ನಿರ್ವಹಣೆ ಬಗ್ಗೆ ಇದುವರೆಗೆ ಕ್ರಮಕ್ಕೆ ಮುಂದಾಗಿಲ್ಲ. ಪರಿಣಾಮವಾಗಿ ಬಿಸಿಲು ಮಳೆಗೆ ತುಕ್ಕು ಹಿಡಿದು ಹಾನಿಯಾಗಿದೆ.

ಅಪಾಯಕಾರಿ ಚಾರಣ: 2018-19ರ ಸಾಲಿನ 1 ಕೋಟಿ ರೂ.ವೆಚ್ಚದ ಕಾಯ್ದಿರಿಸಿದ ಅನುದಾನದಲ್ಲಿ ಬೆಟ್ಟಕ್ಕೆ ಸ್ಟೀಲ್ ರೇಲಿಂಗ್ ಅಳವಡಿಕೆ ಜತೆಗೆ ಮೆಟ್ಟಿಲು ನಿರ್ಮಾಣ ಹಾಗೂ ಇನ್ನಿತರ ಪ್ರವಾಸಿ ಸೌಲಭ್ಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಅನುದಾನ ಸಂಪೂರ್ಣ ವಿನಿಯೋಗವಾದಂತೆ ಕಾಣುತ್ತಿಲ್ಲ, ಬೆಟ್ಟದ ತುದಿ ಹಾಗೂ ತುದಿಗೆ ಸಮೀಪದ ಕೆಲ ಮೀಟರ್‌ಗಳ ಉದ್ದಕ್ಕಷ್ಟೆ ಸ್ಟೀಲ್ ರೇಲಿಂಗ್ ಸೀಮಿತವಾಗಿದೆ. ಅಲ್ಲಲ್ಲಿ ಮೆಟ್ಟಿಲುಗಳು ನಿರ್ಮಾಣವಾಗಿದ್ದರೂ ಎಲ್ಲ ಕಡೆ ಸಾಧ್ಯವಾಗಿಲ್ಲ. ಸುರಕ್ಷತೆ ದೃಷ್ಟಿಯಲ್ಲಿ ರೇಲಿಂಗ್ ಅತ್ಯವಶ್ಯಕವಾಗಿದೆ. ಬೆಟ್ಟದ ತುದಿ ತಲುಪುವ ಹಾದಿಯಲ್ಲಿ ಜಾರುವ ಬಂಡೆಗಳಿದ್ದು, ರೇಲಿಂಗ್ ಸಹಾಯವಿಲ್ಲದೆ ಹತ್ತಲು ಸಾಧ್ಯವೇ ಇಲ್ಲ. ಚಾರಣಿಗರ ನೆರವಿಗೆ ಬರಬೇಕಾದ ರೇಲಿಂಗ್‌ಗಳೇ ಪ್ರವಾಸಿಗರನ್ನು ಅಪಾಯಕ್ಕೆ ದೂಡುವ ಪರಿಸ್ಥಿತಿ ಎದುರಾಗಿದೆ.

ಗಿರಿಧಾಮದಲ್ಲಿ ಪ್ಲಾಸ್ಟಿಕ್ ಕಮಟು: ಪ್ರಕೃತಿ ಸೌಂದರ್ಯವನ್ನು ಹೊದ್ದು ಮಲಗಿರುವ ಗಿರಿಧಾಮದಲ್ಲಿ ಪ್ಲಾಸ್ಟಿಕ್ ಹಾವಳಿ ಹೆಚ್ಚಿದೆ. ಎಲ್ಲಿಯೂ ಕಸ ವಿಲೇವಾರಿಗೆ ವ್ಯವಸ್ಥೆ ಮಾಡಿಲ್ಲ. ವಾಟರ್ ಬಾಟಲಿಗಳು, ತಿಂಡಿ ತಿನಿಸುಗಳ ಪ್ಲಾಸ್ಟಿಕ್ ವಸ್ತುಗಳ ರಾಶಿ ಬೆಟ್ಟದುದ್ದಕ್ಕೂ ಕಂಡುಬರುತ್ತದೆ. ಬೆಟ್ಟದ ತುದಿಯಲ್ಲಿರುವ ಸೀಳುಬಂಡೆ ನಡುವೆ ಪ್ಲಾಸ್ಟಿಕ್ ರಾಶಿ ತುಂಬಿಹೋಗುತ್ತಿದೆ. ಅಲ್ಲಲ್ಲಿ ಕೆಲವು ಕಿಡಿಗೇಡಿಗಳು ಪ್ರಾಸ್ಟಿಕ್ ರಾಶಿಗೆ ಬೆಂಕಿಹಾಕಿ ಪ್ರಕೃತಿ ಸೌಂದರ್ಯಕ್ಕೆ ಮಸಿ ಬಳಿಯುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಖುದ್ದು ಬೆಟ್ಟ ಹತ್ತಿ ಪರಿಶೀಲಿಸಿದ್ದೇನೆ, ಹಳೆಯದಾದ ರೇಲಿಂಗ್‌ಗಳು ತುಕ್ಕುಹಿಡಿದುರುವುದು ಗಮನಕ್ಕೆ ಬಂದಿದೆ. 8 ಕೋಟಿ ರೂ.ವೆಚ್ಚದಲ್ಲಿ ಹೊಸದಾಗಿ ರೇಲಿಂಗ್ ಅಳವಡಿಕೆ, ಮೆಟ್ಟಿಲು ನಿರ್ಮಾಣ ಮತ್ತಿತರ ಮೂಲಸೌಕರ್ಯಕ್ಕಾಗಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಗೆ ಸೂಚಿಸಿದ್ದೇನೆ. ಕೆ.ಶ್ರೀನಿವಾಸ್, ಜಿಲ್ಲಾಡಳಿತ ಕಸ ಸಂಗ್ರಹಣೆಗೆ ಡಸ್ಟ್‌ಬಿನ್‌ಗಳ ಅವಳಡಿಕೆ, ಮುಡಿತೆಗೆಯುವ ಕೊಠಡಿ, ರಸ್ತೆ ಅಭಿವೃದ್ಧಿ, ಮೆಟ್ಟಿಲುಗಳ ನಿರ್ಮಾಣ, ಗಿರಿಸುತ್ತುವಿಕೆ, ಪ್ರವಾಸಿಗರ ವಿಶ್ರಾಂತಿಗೃಹ, ರೇಲಿಂಗ್‌ಗಳ ಅಳವಡಿಕೆ ಮತ್ತಿತರ ಅಭಿವೃದ್ಧಿ ಕಾಮಗಾರಿ ಪಟ್ಟಿ ಸಿದ್ದಪಡಿಸಿದ್ದು ಅನುದಾನದ ನಿರೀಕ್ಷೆಯಲ್ಲಿದ್ದೇವೆ, ಅನುದಾನ ಬಿಡುಗಡೆಯಾದರೆ ಕೂಡಲೇ ಅಗತ್ಯ ಕ್ರಮಕೈಗೊಳ್ಳಲಾಗುವುದು. ಚೆಲುವಾಂಬ, ಸಹಾಯಕ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net