

ತುಮಕೂರು: ಅನ್ನ, ಅಕ್ಷರ, ಆಶ್ರಯ ನೀಡಿ ಲಕ್ಷಾಂತರ ಮಕ್ಕಳು ಬದುಕು ಕಟ್ಟಿಕೊಳ್ಳುವಂತೆ ಮಾಡಿದ ಸಿದ್ಧಗಂಗೆಯ ಶಿವಕುಮಾರ ಶ್ರೀಗಳು ಸಾಧು, ಸನ್ಯಾಸಿಗಳಲ್ಲಿಯೇ ಅನುಕರಣೀಯರು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಬಣ್ಣಿಸಿದರು.
ಹರಳೂರು ಗ್ರಾಮದಲ್ಲಿ ಬುಧವಾರ ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮದಿನೋತ್ಸವದ ಗುರುವಂದನಾ ಕಾರ್ಯಕ್ರಮ ಹಾಗೂ ವೀರಭದ್ರಸ್ವಾಮಿ ದೇವಾಲಯದ ನಿತ್ಯ ದಾಸೋಹದ ಉದ್ಘಾಟನೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂದ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಿವಕುಮಾರ ಶ್ರೀಗಳು ಇರದಿದ್ದರೆ ಲಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರಲ್ಲದೆ, ಹಸಿವಿನಿಂದ ಜೀವ ಕಳೆದುಕೊಳ್ಳುತ್ತಿದ್ದರು. ತ್ರಿವಿಧ ದಾಸೋಹ ಕಲ್ಪಿಸಿದ ಸಿದ್ಧಗಂಗಾ ಮಠದ ಸೇವೆ, ಕಾರ್ಯವೈಖರಿ ಮಾದರಿಯಾಗಿದೆ ಎಂದರು.
ಒಂದು ಮಠ ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗದೆ ತನ್ನ ಸುತ್ತಮುತ್ತಲಿನ ಜನರ ಕಷ್ಟಗಳಿಗೆ ಪರಿಹಾರ ಕಂಡು ಹಿಡಿಯಬಹುದು ಎಂಬುದಕ್ಕೆ ಸಿದ್ಧಗಂಗಾ ಮಠವು ನಿದರ್ಶನವೆನಿಸಿದೆ. ನಾನು ಭಕ್ತಿ ಹಾಗೂ ಪ್ರೀತಿ, ಗೌರವದಿಂದ ಕಾಣುವ ಸ್ವಾಮೀಜಿ ಇದ್ದರೆ ಅದು ಶಿವಕುಮಾರ ಶ್ರೀಗಳು. ಅವರು ನಮಗೆ ಭೂಮಿಯ ಮೇಲೆ ಹೇಗೆ ಮನುಷ್ಯರಾಗಿ ಬದುಕುಬೇಕೆಂಬ ಮಾರ್ಗದರ್ಶನ ಮಾಡಿ ಹೋಗಿದ್ದಾರೆ ಎಂದು ತಿಳಿಸಿದರು.
ಪ್ರಶಸ್ತಿ ಬಯಸಿದವರಲ್ಲ: ಭಕ್ತರ ಪಾಲಿಗೆ ನಡೆದಾಡುವ ದೇವರೆನಿಸಿರುವ ಶ್ರೀಗಳು ಎಂದೂ ಪ್ರಶಸ್ತಿಗಳನ್ನು ಬಯಸಿದವರಲ್ಲ. ಆದರೂ, ಅನೇಕ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ. ಅವರ ಹೆಸರನ್ನು ಸ್ಮರಿಸಿದರೆ ಸಾಲದು, ಅವರು ನಡೆದ ದಾರಿಯಲ್ಲಿ ಕಿಂಚಿತ್ತಾದರೂ ಸಾಗುವ ಮೂಲಕ, ಅನ್ಯರ ಬದುಕಿಗೆ ನೆರವಾದರೆ ಅದು ನಾವು ಶ್ರೀಗಳಿಗೆ ಸಲ್ಲಿಸುವ ಗೌರವ ಎನಿಸಲಿದೆ ಎಂದು ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ಹರಳೂರು ಹಾಗೂ ಸಿದ್ಧಗಂಗೆಗೆ ಅವಿನಾಭಾವ ಸಂಬಂಧವಿದೆ. ಶ್ರೀ ಉದ್ಧಾನ ಶಿವಯೋಗಿಗಳು ಈ ಊರಲ್ಲಿ ಕೆರೆ ನಿರ್ಮಿಸುವುದರ ಜತೆಗೆ ಶಾಲೆ ಪ್ರಾರಂಭಿಸಬೇಕೆಂಬ ಕನಸು ಕಂಡಿದ್ದರು. ಅದನ್ನು ಶ್ರೀಗಳು ನನಸು ಮಾಡಿದರು. ರಾಜ್ಯದಲ್ಲಿಯೇ ಮೊದಲಿಗೆ ಸ್ವಾಮೀಜಿಯವರ ಪುತ್ಥಳಿ ಅನಾವರಣ ಮಾಡಿದ ಗ್ರಾಮವೆಂದರೆ ಹರಳೂರು, ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳನ್ನು ಈ ಗ್ರಾಮದ ಜನತೆ ಹೃದಯದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು.
ಶಿಕ್ಷಕ, ಸಾಹಿತಿ ಹರಳೂರು ಶಿವಕುಮಾರ್ ರಚಿಸಿರುವ ಅರಿವಿನ ಕಣ್ಣು ಪುಸ್ತಕ ಬಿಡುಗಡೆ ಮಾಡಲಾಯಿತು. ಹರಳೂರು ಜಂಗಮ ಮಠ ಚನ್ನಬಸವ ಸ್ವಾಮೀಜಿ, ಕಂಬಾಳು ಶ್ರೀ ವೀರಸಂಸ್ಥಾನ ಮಠದ ಚನ್ನವಿರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಬಿ.ಸುರೇಶಗೌಡ ಅಧ್ಯಕ್ಷತೆ ವಹಿಸಿದ್ದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ತುಮುಲ್ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ, ನಿರ್ದೇಶಕ ಎಚ್.ಕೆ.ರೇಣುಕಾಪ್ರಸಾದ್, ಹರಿಕಥಾ ವಿದ್ವಾನ್ ಡಾ.ಲಕ್ಷ$್ಮಣದಾಸ್, ವೈ.ಎಚ್.ಹುಚ್ಚಯ್ಯ, ಕೆ.ಎಸ್.ಶಂಕರಯ್ಯ, ಬಿ.ಪಿ.ಪ್ರಕಾಶ್, ಹರಳೂರು ಹಾಲು ಉತ್ಪಾದಕರ ಸಂದ ಅಧ್ಯಕ್ಷ ಕೆ.ಎಚ್.ಕುಮಾರಯ್ಯ, ಹರಳೂರು ಗ್ರಾಪಂ ಅಧ್ಯಕ್ಷ ಎಚ್.ಕೆ.ಶಿವಪ್ರಸಾದ್, ತುಮುಲ್ ವ್ಯವಸ್ಥಾಪಕ ನಿರ್ದೇಶಕ ಸುಬ್ರಾಯ ಭಟ್, ತುಮಕೂರು ವೀರಶೈವ ಸಮಾಜದ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಎನ್.ಎಸ್.ಹೊನ್ನೇಶಕುಮಾರ್, ಉಮಾಶಂಕರ್ ಮುತ್ತಿತರರು ಉಪಸ್ಥಿತರಿದ್ದರು.
ಹರಳೂರಿನ ವೀರಭದ್ರಸ್ವಾಮಿ ದೇವಾಲಯ ಸಮಿತಿ ಆರಂಭಿಸಿರುವ ನಿತ್ಯ ದಾಸೋಹಕ್ಕೆ ಸಿದ್ದಲಿಂಗ ಶ್ರೀಗಳು ಚಾಲನೆ ನೀಡಿದ್ದಾರೆ. ಇದು ಮತ್ತಷ್ಟು ಹೆಮ್ಮರವಾಗಿ ಬೆಳೆದು ಭಕ್ತರ ಹಸಿವು ತಣಿಸುವ ಕಾರ್ಯ ಮಾಡಲಿ. > ಆರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ