

ರಾಮನಗರ: ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಭಕ್ತರ ಮನಸ್ಸಿನಲ್ಲಿ ನೆಲೆಸಿರುವ ಶಿವೈಕ್ಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಪ್ರತಿಮೆ ನಿರ್ಮಾಣ ಕಾಮಗಾರಿ ಮಾಗಡಿ ತಾಲೂಕಿನ ವೀರಾಪುರದಲ್ಲಿ ಬಿರುಸಿನಿಂದ ಸಾಗಿದೆ.
ಶಿವಕುಮಾರ ಸ್ವಾಮೀಜಿ ಜನ್ಮಸ್ಥಳ ವೀರಾಪುರದ ಅಭಿವೃದ್ಧಿಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಜೆಟ್‌ನಲ್ಲಿ ೋಷಣೆ ಮಾಡಿತ್ತು. ನಂತರ 2019ರ ನ.8ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮತ್ತು ಗ್ರಾಮದ ಅಭಿವೃದ್ಧಿಗೆ ಚಾಲನೆ ನೀಡಿದ್ದರು.
ಬಿ.ಎಸ್.ಯಡಿಯೂರಪ್ಪ ಎರಡು ಬಾರಿ ಚಾಲನೆ ನೀಡಿದ್ದರ ಹೊರತಾಗಿಯೂ ಕೋವಿಡ್ ಸೇರಿ ವಿವಿಧ ಕಾರಣಗಳಿಗಾಗಿ ಪ್ರತಿಮೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇದೀಗ ಚಾಲನೆ ದೊರೆತು ಕೆಲಸ ವೇಗ ಪಡೆದುಕೊಂಡಿದೆ. ಪ್ರತಿಮೆ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿದ್ಧಗಂಗಾ ಶ್ರೀಗಳು ಭೇಟಿ ನೀಡಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದ್ದು, ಇದರ ಅನ್ವಯ ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ನೇತೃತ್ವದಲ್ಲಿ ಪ್ರತಿಮೆ ನಿರ್ಮಾಣ ಸಾಗಿದೆ.
ಪ್ರತಿಮೆ ವಿಶೇಷವೇನು?: 111 ಅಡಿ ಎತ್ತರದ ಶ್ರೀಗಳ ಪ್ರತಿಮೆ ರಾಜ್ಯದಲ್ಲಿ ಅತಿ ಎತ್ತರದ ಪ್ರತಿಮೆಯಾಗಲಿದೆ. ಗದಗ್‌ನಲ್ಲಿ ನಿರ್ಮಿಸಿರುವ ಬಸವೇಶ್ವರರ ಪ್ರತಿಮೆ ತಳಪಾಯ ಸೇರಿ ಒಟ್ಟು 116 ಅಡಿ ಎತ್ತರವಿದ್ದರೆ, ಶ್ರೀಗಳ ಪ್ರತಿಮೆ ತಳಪಾಯ ಸೇರಿ ಒಟ್ಟು 141 ಅಡಿ ಎತ್ತರವಿರುತ್ತದೆ. 30 ಅಡಿ ಬಂಡೆಯಾಕಾರದ ತಳಪಾಯ ನಿರ್ಮಾಣವಾಗಲಿದ್ದು, ಇದರ ಮೇಲೆ ಊರುಗೋಲು ಹಿಡಿದುಕೊಂಡಿರುವ ಖಾವಿಧಾರಿ ಶ್ರೀಗಳ ಬೃಹತ್ ಪ್ರತಿಮೆ ಇರಲಿದೆ. ಇದರ ಜತೆಗೆ ಶ್ರೀಗಳ ಪ್ರತಿಮೆ ಪಾದತಳಕ್ಕೆ ಹೋಗಲು 111 ಮೆಟ್ಟಿಲುಗಳನ್ನು ನಿರ್ಮಿಸುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷ. ತಳಪಾಯದಲ್ಲಿ ಸಭಾ ಭವನ, ಮ್ಯೂಸಿಯಂ, ಮೆಡಿಟೇಷನ್ ಹಾಲ್, ಜತೆಗೆ ಲಾಬಿಗಳು ಇರಲಿದ್ದು, ಮ್ಯೂಸಿಯಂನಲ್ಲಿ ಶ್ರೀಗಳ ಜೀವನ ತೋರಿಸುವ ಆಧುನಿಕ ವಿಡಿಯೋ ಮತ್ತು ಆಡಿಯೋ ವ್ಯವಸ್ಥೆ ಇರಲಿದೆ. ಇದರ ಜತೆಗೆ ತಳಪಾಯದ ಸುತ್ತ ಭಕ್ತರು ಮತ್ತು ಪ್ರವಾಸಿಗರು ಕುಳಿತು ನೋಡಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ ಮಾಡಲಾಗುತ್ತದೆ.
ಇವಲ್ಲದೆ, ವೀರಾಪುರದಲ್ಲಿ ಶ್ರೀಗಳ ತಂದೆ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮ ಅವರ ಸಮಾಧಿ ಇದ್ದು, ಇದರ ಬಳಿಯೇ ದೇವಾಲಯ ನಿರ್ಮಿಸಲಾಗುತ್ತದೆ.
ಬಂಡೆ ಮೇಲೆ ಮೂರ್ತಿ: ಶ್ರೀ ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು ವೀರಾಪುರದಲ್ಲಿ ಒಂದು ದೊಡ್ಡ ಬೆಟ್ಟ ಇದೆ. ಇದರ ಮೇಲೆಯೇ ಆಟವಾಡುತ್ತಾ ಕಾಲ ಕಳೆಯುತ್ತಿದ್ದ ಶ್ರೀಗಳು, ಪಕ್ಕದಲ್ಲಿಯೇ ಕುಳಿತು ಧ್ಯಾನಸ್ಥರಾಗುತ್ತಿದ್ದ ಉದ್ದಾನ ಶಿವಯೋಗಿಗಳನ್ನು ಕಂಡು ಸನ್ಯಾಸದೆಡೆಗೆ ಆಕರ್ಷಿತರಾಗಿದ್ದರು. ಇದಾದ ನಂತರ ತಮ್ಮೂರಿನಲ್ಲಿಯೇ ಕುಳಿತು ಪಕ್ಕದ ಶಿವಗಂಗೆ ಬೆಟ್ಟದೆಡೆಗೆ ಯಾವಾಗಲೂ ನೋಡುತ್ತಿದ್ದರು. ನಂತರ ವೀರಾಪುರ ಬೆಟ್ಟದ ಮೇಲೆ ಶಿವಗಂಗೆ ಬೆಟ್ಟಕ್ಕೆ ಎದುರಿಗೆ ಕುಳಿತು ಶಿವಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ತಮ್ಮ ಮನೆ ದೇವರಾದ ಶಿವಗಂಗೆಯ ಗಂಗಾಧರೇಶ್ವರ ಮತ್ತು ಹೊನ್ನಾದೇವಿಯನ್ನು ಆರಾಧಿಸುತ್ತಿದ್ದರು. ಈ ಹಿನ್ನೆಲೆಯಲ್ಲಿಯೇ ಶ್ರೀಗಳು ಶಿವಗಂಗೆ ಬೆಟ್ಟಕ್ಕೆ ಅಭಿಮುಖವಾಗಿ ನಿಂತ ಭಂಗಿಯಲ್ಲಿರುವ ಪ್ರತಿಮೆ ನಿರ್ಮಾಣಗೊಳ್ಳಲಿದೆ.
ಶ್ರೀಗಳ ಪ್ರತಿಮೆ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿದೆ. ತಳಪಾಯ ನಿರ್ಮಾಣ ನಡೆಯುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಪ್ರತಿಮೆ ನಿರ್ಮಾಣವಾಗಲಿದೆ. ಉಳಿದಂತೆ ಗ್ರಾಮದ ಸಂಪೂರ್ಣ ಅಭಿವೃದ್ಧಿ ಸೇರಿ ವಿವಿಧ ಕಾಮಗಾರಿಗಳಿಗೆ 85 ಕೋಟಿ ರೂ. ಅನುದಾನಕ್ಕೆ ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಎಂ.ರುದ್ರೇಶ್, ಕೆಆರ್‌ಐಡಿಎಲ್ ಅಧ್ಯಕ್ಷ
ಶ್ರೀಗಳ ಪ್ರತಿಮೆ ನೀಲನಕ್ಷೆ ಬಳಸಿಕೊಳ್ಳಿ