

ಕಮಲನಗರ: ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶಿವಕುಮಾರ ಝುಲ್ಪೆ, ಉಪಾಧ್ಯಕ್ಷೆಯಾಗಿ ಕಿರಣ ಚವ್ಹಾಣ್ ಶುಕ್ರವಾರ ಅವಿರೋಧ ಆಯ್ಕೆಯಾದರು. ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ವಾಡ್೯ 8ರ ಸದಸ್ಯ ಶಿವಕುಮಾರ ಝುಲ್ಪೆ ಹಾಗೂ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ವಾಡ್೯ 6ರ ಸದಸ್ಯೆ ಕಿರಣ ಚವ್ಹಾಣ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು.
ಗ್ರಾಪಂನ 31 ಸದಸ್ಯರ ಪೈಕಿ 27 ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವೇಳೆ ಹಾಜರಿದ್ದರು ಎಂದು ಚುನಾವಣಾ ಅಧಿಕಾರಿ ಸಂತೋಷ ಶೇಳಕೆ ಮಾಹಿತಿ ನೀಡಿದರು. ನೂತನ ಅಧ್ಯಕ್ಷ ಶಿವಕುಮಾರ ಝುಲ್ಪೆ 2012ರಲ್ಲಿಯೂ ಕಮಲನಗರ ಗ್ರಾಪಂ ಅಧ್ಯಕ್ಷರಾಗಿದ್ದರು.
ತಾಪಂ ಸಹಾಯಕ ನಿರ್ದೇಶಕ ಶಿವಾನಂದ ಔರಾದೆ, ಸಹಾಯಕ ಚುನಾವಣಾಧಿಕಾರಿ ಸೂರ್ಯಕಾಂತ ಬಿರಾದಾರ ಅವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯನ್ನು ಸನ್ಮಾನಿಸಿದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕಟಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸಿಪಿಐ ಪಾಲಕ್ಷಯ್ಯ ಹಿರೇಮಠ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಆಯ್ಕೆ ವಿಳಂಬವೇಕಾಯ್ತು?
ಫೆ.4 ರಂದು ಕಮಲನಗರ ಗ್ರಾಪಂ ಹೊರತುಪಡಿಸಿ ತಾಲೂಕಿನ 17 ಗ್ರಾಪಂ 30 ತಿಂಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಆದರೆ ಕಮಲನಗರ ಪಂಚಾಯಿತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲು ವಿಷಯ ಕೋಟ್೯ ಮೆಟ್ಟಿಲೇರಿದ್ದರಿಂದ ಆಯ್ಕೆ ವಿಳಂಬವಾಗಿದೆ. ಗ್ರಾಪಂ ಸದಸ್ಯ ಪ್ರವೀಣ ಕದಮ್ ಅವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯಲ್ಲಿ ಗೊಂದಲ ಏರ್ಪಟ್ಟಿದೆ. ಹೀಗಾಗಿ ಆಯ್ಕೆ ಪ್ರಕ್ರಿಯೆ ತಡೆಯಾಜ್ಞೆ ಕೋರಿದ್ದರು. ಅದರಂತೆ ಕಲಬುರಗಿ ಹೈಕೋಟ್೯ ತಡೆಯಾಜ್ಞೆ ನೀಡಿತ್ತು.
ಕದಮ್ ವಾದವೇನು: ಜ.22 ರಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಔರಾದ್ ಪಟ್ಟಣದಲ್ಲಿ ಕಮಲನಗರ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆಗೆ ಮೀಸಲು ಎಂದು ಪ್ರಕಟಿಸಿದ್ದರು. ಆದರೆ ಜ.27 ರಂದು ಪಂಚಾಯಿತಿ ಪಿಡಿಒ ಅವರು ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲು ಎಂದು ನೋಟಿಸ್ ಕಳುಹಿಸಿದ್ದಾರೆ. ಆಯ್ಕೆ ಪ್ರಕ್ರಿಯೆ ವೇಳೆ ನಾವು ಯಾರಿಗೆ ಮತ ಹಾಕಬೇಕೆಂಬುದೇ ತಿಳಿಯುತ್ತಿಲ್ಲ. ಹೀಗಾಗಿ ಚುನಾವಣೆ ಮುಂದೂಡಬೇಕು ಎಂದು ಹೈಕೋಟ್೯ ಮೊರೆ ಹೋಗಿದ್ದರು. ಅದರಂತೆ ಹೈಕೋಟ್೯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಬ್ರೇಕ್ ಹಾಕಿತ್ತು. ಸುದೀರ್ಘ ವಿಚಾರಣೆ ನಂತರ ಫೆ.18 ರಂದು ಹೈಕೋಟ್೯ ನೀಡಿದ ಆದೇಶದಂತೆ ಶುಕ್ರವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಿತು.
ಪಿಡಿಒ ಸಸ್ಪೆಂಡ್
ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯು ತಪ್ಪಾಗಿ ಹೊರಡಿಸಿದ ಕಾರಣ ಫೆ.20 ರಂದು ಜಿಲ್ಲಾ ಪಂಚಾಯಿತಿ ಸಿಇಒ ಅವರು ಕಮಲನಗರ ಪಿಡಿಒ ವಿನೋದಕುಮಾರ ಕುಲಕರ್ಣಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.