ಶಿವ ದೇಗುಲಗಳಲ್ಲಿ ವಿಶೇಷ ಪೂಜೆ

Oplus_131072
Oplus_131072
Published on

ಯಳಂದೂರು: ತಾಲೂಕಿನಾದ್ಯಂತ ಬುಧವಾರ ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ಶಿವ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆದವು.

ಪಟ್ಟಣದಲ್ಲಿರುವ ಐತಿಹಾಸಿಕ ಗೌರೇಶ್ವರ, ಪಾರ್ವತಾಂಬೆ ದೇಗುಲಗಳಲ್ಲೂ ವಿಶೇಷ ಪೂಜೆ ನಡೆದವು. ದೇಗುಲದ ಹಿಂಭಾಗದಲ್ಲಿರುವ ಪಂಚಲಿಂಗಗಳಿಗೂ ಕೊಳಗ ಧಾರಣೆ ಮಾಡಿ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ದೇಗುಲದ ಮುಂಭಾಗದಲ್ಲಿರುವ ಬಳೇಮಂಟಪವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.

ರಾತ್ರಿ ವೇಳೆ 5 ಜಾವದಲ್ಲಿ ರುದ್ರಾಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿ ಅಭಿಷೇಕಕ್ಕೂ 101 ಎಳನೀರನ್ನು ದೇವರಿಗೆ ಸಮರ್ಪಿಸಲಾಯಿತು. ದೇವಸ್ಥಾನದಲ್ಲಿ ಹೋಮ, ಹವನಗಳನ್ನು ಮಾಡಿ ದೇವರಿಗೆ ಬಿಲ್ವಪತ್ರೆ ಸೇರಿದಂತೆ ವಿವಿಧ ಹೂವುಗಳಿಂದ ಅಲಂಕಾರ ಮಾಡಿ ನಂತರ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿ ದೇವರ ದರ್ಶನ ಪಡೆದರು. ದೇಗುಲದ ಆವರಣದಲ್ಲಿ ಶಿವರಾತ್ರಿ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಬಳೇಪೇಟೆ ಶಾಂತರಾಜು ನೇತೃತ್ವದಲ್ಲಿ ರಂಗದೇಗುಲ ಕಲಾವೇದಿಕೆಯ ಸದಸ್ಯರು ಭಕ್ತಿಗೀತೆ ಗಾಯನ ನಡೆಯಿತು. ದೇವಾಲಯಕ್ಕೆ ಬಂದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಕಾರ್ಯ ನಡೆಯಿತು ಮಹೇಶ್ ಚಂದ್ರಮೌಳಿ ದೀಕ್ಷಿತ್ ಮಾಹಿತಿ ನೀಡಿದರು.

ಕಂದಹಳ್ಳಿ ಮಹದೇಶ್ವರ ದೇಗುದಲ್ಲಿ ಶಿವರಾತ್ರಿ ನಿಮಿತ್ತ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಗಣಿಗನೂರು ಗ್ರಾಮದ ಸುವರ್ಣಾವತಿ ನದಿ ದಡದಲ್ಲಿರುವ ನೀಲಕಂಠೇಶ್ವರ ದೇಗುಲದಲ್ಲೂ ವಿಶೇಷ ಪೂಜೆಗಳು ನಡೆದವು. ಅಗರ-ಮಾಂಬಳ್ಳಿ, ಗೌಡಹಳ್ಳಿ, ಮಲಾರಪಾಳ್ಯ, ಗುಂಬಳ್ಳಿ, ಯರಗಂಬಳ್ಳಿ, ಹೊನ್ನೂರು, ಕೆಸ್ತೂರು ಗ್ರಾಮಗಳಲ್ಲೂ ಈಶ್ವರ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net