

ಅರಕಲಗೂಡು: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶನಿವಾರ ಮಹಾ ಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶಿವನ ದೇವಾಲಯಗಳಲ್ಲಿ ಅಭೀಷೇಕ, ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಪಟ್ಟಣದ ಕೋಟೆ ಪುರಾಣ ಪ್ರಸಿದ್ಧ ಅಮೃತೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬೆಳಗ್ಗೆ ಮಹಾನ್ಯಾಸ ಪೂರ್ವಕ ರುದ್ರಾಭೀಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು.
ಮಧ್ಯಾಹ್ನ ಗಿರಿಜಾ ಕಲ್ಯಾಣ ಹಾಗೂ ರಾತ್ರಿ ನಾಲ್ಕು ಯಾಮಗಳ ರುದ್ರಾಭಿಷೇಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಸಮೀಪದ ಶಂಭುನಾಥಪುರದ ಐತಿಹಾಸಿಕ ಸ್ವಯಂಭುನಾಥೇಶ್ವರಸ್ವಾಮಿ ದೇವಾಲಯದಲ್ಲಿ ಪಾರ್ವತಮ್ಮ ಸೇವಾ ಟ್ರಸ್ಟ್ ವತಿಯಿಂದ ರುದ್ರಾಭಿಷೇಕ ಹಾಗೂ ಪೂಜಾ ಕಾರ್ಯಗಳು ನಡೆದವು. ಪೇಟೆ ನಂಜುಂಡೇಶ್ವರಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ಅಭಿಷೇಕ ಮತ್ತು ಪೂಜಾ ಕಾರ್ಯಗಳನ್ನು ನಡೆಸಲಾಯಿತು.
ಸಂಜೆ ಸಾಮೂಹಿಕ ಶಿವ ಲಕ್ಷ ವಿಭೂತಿ ಅರ್ಚನಾ ನಾಮಾವಳಿ, ಲಿಂಗಾಷ್ಠಕ, ನಂಜುಂಡೇಶ್ವರಸ್ವಾಮಿ ಮಹಿಮಾವಳಿ ಪಠಣೆ, ರಾತ್ರಿ ನಾಲ್ಕು ಯಾಮಗಳ ಪೂಜೆ ನಡೆಸಲಾಯಿತು.
ಪಟ್ಟಣದ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದಲ್ಲಿ ದೇವರಿಗೆ ವಿಶೇಷವಾಗಿ ಮಾಡಲಾಗಿದ್ದ ಶಿವನ ಅಲಂಕಾರ ಗಮನ ಸೆಳೆಯಿತು. ವೀರಭದ್ರೇಶ್ವರ, ಶಕ್ತಿ ಗಣಪತಿ, ಬಸವೇಶ್ವರ, ಶನೈಶ್ಚರ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ರಾತ್ರಿ ಸಾಮೂಹಿಕ ಭಜನೆ, ಜಾಗರಣೆ ನಡೆಸಿ ಭಕ್ತರು ಸಂಭ್ರಮಿಸಿದರು.
ರಾಮನಾಥಪುರದ ಐತಿಹಾಸಿಕ ದೇವಾಲಯಗಳು, ಬಸವಾಪಟ್ಟಣದ ಬಸವೇಶ್ವರ, ಷಡ್ಭಾಳರಹಿತೇಶ್ವರ, ಕೇರಳಾಪುರದ ಶ್ರೀವೀರಭದ್ರೇಶ್ವರ ಹಾಗೂ ಕಾಳೇನಹಳ್ಳಿಯ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಲಾಯಿತು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.