ಶಿಲ್ಪಿ ಅಗರ್ವಾಲ್ ನೂತನ ಡಿಆರ್‌ಎಂ

c1169c74-917f-4a51-84fe-c8a7ca4d692e
Published on

ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿಯಾಗಿ ಶಿಲ್ಪಿ ಅಗರ್ವಾಲ್ ನಿಯೋಜನೆಗೊಂಡಿದ್ದಾರೆ. ನಿರ್ಗಮಿತ ಡಿಆರ್‌ಎಂ ರಾಹುಲ್ ಅಗರ್ವಾಲ್ ಅವರಿಂದ ಅಧಿಕಾರ ವಹಿಸಿಕೊಂಡರು.


ಇದಕ್ಕೂ ಮೊದಲು ಇವರು ರೈಲ್ವೆ ಸಚಿವಾಲಯದ ನಿರ್ಮಾಣ ವಿಭಾಗವಾದ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್‌ವಿಎನ್‌ಎಲ್) ಯೋಜನೆಯ ಅನುಷ್ಠಾನ ಮತ್ತು ಸಾರಿಗೆ ಮೂಲಸೌಕರ್ಯ ಅಭಿವೃದ್ಧಿ (ಹಣಕಾಸು) ವಿಭಾಗದಲ್ಲಿ ಸಮೂಹ ಪ್ರಧಾನ ವ್ಯವಸ್ಥಾಪಕರಾಗಿದ್ದರು.


ಭಾರತೀಯ ರೈಲ್ವೆ ವಿತ್ತೀಯ ಸೇವೆಯ (ಐಆರ್‌ಎಎಸ್) 1993ರ ಬ್ಯಾಚ್‌ನ ಇವರು ಲಕ್ನೋ ವಿಶ್ವವಿದ್ಯಾಲಯದಿಂದ ಕಲೆಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಮಾಜಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಸುಮಾರು 3 ದಶಕಗಳ ಅನುಭವ ಹೊಂದಿದ್ದು, ಉತ್ತರ ರೈಲ್ವೆ ಮತ್ತು ರೈಲ್ವೆ ಮಂಡಳಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಭಾರತೀಯ ರೈಲ್ವೆಯ ಬಹುತೇಕ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನಿರ್ಮಾಣ, ಸಂಚಾರ, ಭಂಡಾರ, ಸಿಬ್ಬಂದಿ ಮತ್ತು ಆಡಳಿತ ಕ್ಷೇತ್ರಗಳಲ್ಲಿ ವಿತ್ತೀಯ ಖಾತೆಯ ಅನುಭವ ಹೊಂದಿದ್ದಾರೆ.


ಉತ್ತರಾಖಂಡದ ಚಾರ್‌ಧಾಮ್ ಯೋಜನೆಯಂತಹ ಸಂಕೀರ್ಣ ಮೂಲಸೌಕರ್ಯ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ತಂಡದ ಅವಿಭಾಜ್ಯ ಅಂಗವಾಗಿದ್ದರು. ಅನೇಕ ಹಳಿ ದ್ವಿಪಥ ಮತ್ತು ರೈಲ್ವೆ ವಿದ್ಯುದ್ದೀಕರಣ ಯೋಜನೆ ಹಾಗೂ ಆರ್‌ವಿಎನ್‌ಎಲ್ ವ್ಯವಹಾರವನ್ನು ದೇಶದ ಹೊರಗೆ, ವಿಶೇಷವಾಗಿ ಮಾಲ್ಡೀವ್ಸ್‌ನಲ್ಲಿ ವಿಸ್ತರಿಸುವಲ್ಲಿ ಪ್ರಮುಖರಾಗಿದ್ದರು. 2010ರಲ್ಲಿ ಅತ್ಯುತ್ತಮ ಕೆಲಸಕ್ಕಾಗಿ ರೈಲ್ವೆ ಸಚಿವರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net