ಶಿಲಾಯುಗದ ಮಾನವನ ನೆಲೆಯ ಶೋಧ

24 YERRISWAMY 08
Published on

ಬಳ್ಳಾರಿ : ಜಿಲ್ಲೆಯ ಸಂಡೂರಿನ ದಟ್ಟ ಕಾಡಿನಲ್ಲಿ ಸಮುದ್ರಮಟ್ಟಕ್ಕಿಂತ ಅತಿ ಎತ್ತರದ ಗುಹೆಗಳಲ್ಲಿ ಶಿಲಾಯುಗದ ಮಾನವನ ನೆಲೆಯ ಕುರಿತು ತಜ್ಞರ ಶೋಧನೆಯಿಂದ ಕಂಡುಬಂದಿದೆ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ಹೆರಿಟೇಜ್ ಟ್ರಸ್ಟ್ ಹಾಗೂ ನಗರದ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪ್ರಾಗೈತಿಹಾಸ ವಸ್ತು ಸಂಗ್ರಹಾಲಯದ ಸದಸ್ಯರು ಮತ್ತು ಖ್ಯಾತ ಪ್ರಾಗೈತಿಹಾಸ ತಜ್ಞರಾದ ಡಾ.ರವಿ ಕೋರಿಶೆಟ್ಟರ್, ಡಾ.ಸಮದ್ ಕೊಟ್ಟೂರು ಇವರ ಮಾರ್ಗದರ್ಶನದಲ್ಲಿ ಕಳೆದ ಜೂನ್ ಕೊನೆಯ ವಾರದಲ್ಲಿ ಶೋಧಯಾನ ಕೈಗೊಂಡು ನವಲೂಟಿಯ ಗುಹೆಗೆ ಭೇಟಿ ನೀಡಿದ್ದರು. ಈ ತಂಡದಲ್ಲಿ ಸಂತೋಷ್ ಮಾರ್ಟಿನ್, ಅಹಿರಾಜ್.ಎಂ ಹಾಗೂ ಕೆಲವು ಪ್ರಾಗೈತಿಹಾಸದ ವಿದ್ಯಾರ್ಥಿಗಳೂ ಭಾಗವಹಿಸಿದ್ದರು. ಈ ತಂಡಕ್ಕೆ ಶಿಲಾಯುಗದಲ್ಲಿ ನವಲೂಟಿ ಗುಹೆಯಲ್ಲಿ ಮಾನವ ನೆಲೆಸಿದ್ದ ಎಂಬುದಕ್ಕೆ ಅದ್ಭುತವಾದ ಪುರಾವೆಗಳು ದೊರಕಿವೆ ಎಂದು ಅವರು ಹೇಳಿದ್ದಾರೆ.
ಇಲ್ಲಿ ದೊರೆತ ಕೆಲವು ಸೂಕ್ಷ್ಮ ಶಿಲಾ ಉಪಕರಣಗಳು ಈಗಾಗಲೇ ತಿಳಿದಿರುವ ಭಾರತದ ಮಧ್ಯಶಿಲಾಯುಗದ ಶಿಲಾ ಉಪಕರಣಗಳನ್ನು ಹೋಲುತ್ತಿದ್ದು, ದೊರೆತ ಮೂಳೆಗಳು ಸಾಕು ಪ್ರಾಣಿಗಳಾದ ದನ ಹಾಗೂ ಮೇಕೆಗಳದ್ದಾಗಿವೆ ಎಂದು ತಿಳಿದು ಬಂದಿದೆ. ಆದರೆ ಈ ನಿರ್ಧಾರ ತಾತ್ಕಾಲಿಕವಾಗಿದ್ದು, ದೊರೆತ ಸೂಕ್ಷ್ಮ ಶಿಲಾ ಉಪಕರಣಗಳ ನಿಖರವಾದ ಕಾಲವನ್ನು ಮತ್ತು ಅವುಗಳ ಹೆಚ್ಚಿನ ವಿವರವನ್ನು ಸುದೀರ್ಘ ವೈಜ್ಞಾನಿಕ ಸಂಶೋಧನೆಯಿಂದ ತಿಳಿಯಲು ಸಾಧ್ಯವಾಗುತ್ತದೆ ಎಂದು ಡಿಸಿ ಅಭಿಪ್ರಾಯ ಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net