ಶಿರೂರ- ಹಿರೇಕುಂಬಿ ರಸ್ತೆ ದುರಸ್ತಿ ಮಾಡಿ

13nlg_1
Published on

ನವಲಗುಂದ: ಶಿರೂರ- ಹಿರೇಕುಂಬಿ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಶಿರೂರ ಗ್ರಾಮಸ್ಥರು ನೀರಾವರಿ ಇಲಾಖೆ ಅಧಿಕಾರಿಗಳ ವಾಹನದ ಚಕ್ರದ ಗಾಳಿ ತೆಗೆದು ಭಾನುವಾರ ಆಕ್ರೋಶ ವ್ಯಕ್ತಪಡಿಸಿದರು.

ಶಿರೂರ ಗ್ರಾಮದ ಮುಖಂಡ ಮಲ್ಲಿಕಾರ್ಜುನಗೌಡ ಬಾಳನಗೌಡ್ರ ಮಾತನಾಡಿ, ಎರಡು ವರ್ಷಗಳ ಹಿಂದೆ ಶಿರೂರ ಗ್ರಾಮದ ಬಳಿ ಮಲಪ್ರಭಾ ಬಲದಂಡೆ ಕಾಲುವೆ ಆಧುನಿಕರಣ ಕಾಮಗಾರಿ ವೇಳೆ ಟಿಪ್ಪರ್ ವಾಹನಗಳನ್ನು ಓಡಿಸಿದ್ದರಿಂದ ಶಿರೂರ- ಹಿರೇಕುಂಬಿ 8 ಕೀ.ಮಿ. ರಸ್ತೆ ಹಾಳಾಗಿದೆ. ಕಾಮಗಾರಿ ಮುಗಿದ ಬಳಿಕ ರಸ್ತೆ ನಿರ್ವಿುಸಿಕೊಡುತ್ತೇವೆಂದು ಆಗ ಅಧಿಕಾರಿಗಳು ಭರವಸೆ ನೀಡಿದ್ದರು. ಕಾಮಗಾರಿ ಮುಗಿದು 2 ವರ್ಷ ಕಳೆದರೂ ರಸ್ತೆ ದುರಸ್ತಿ ಮಾಡಿಸಿಲ್ಲ ಎಂದು ದೂರಿದರು.ರೈತರು ಹೊಲಕ್ಕೆ ತೆರಳಲು ಆಗುತ್ತಿಲ್ಲ. ಇದರಿಂದ ಸಾವಿರಾರು ರೈತರು ಹೊಲದಲ್ಲಿ ಬೆಳೆದ ಹೆಸರು ಫಸಲನ್ನು ಮನೆಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.ಶಂಕ್ರಗೌಡ ತೋಟದ, ಸಂಗನಗೌಡ ತೋಟದ, ಚಂದ್ರುಗೌಡ ಬಸ್ತಿ, ದ್ಯಾಮನಗೌಡ ಬಾಳನಗೌಡ್ರ, ಷಣ್ಮುಖ ಬಸಣ್ಣವರ, ಚಂದ್ರು ಯಾದವಾಡ ಇತರರು ಇದ್ದರು.
ವಾಹನಕ್ಕೆ ಬೆಂಕಿ ಹಚ್ಚುವ ಎಚ್ಚರಿಕೆ
ನೀರಾವರಿ ಇಲಾಖೆ ಅಧಿಕಾರಿಗಳು ಶಿರೂರ ಬಳಿ ಕಾಲುವೆ ವೀಕ್ಷಿಸಲು ಭಾನುವಾರ ಬಂದಿದ್ದರು. ಆಗ ವಾಹನ ತಡೆದು ಗ್ರಾಮಸ್ಥರು ವಾಹನದ ಚಕ್ರಗಳ ಗಾಳಿ ತೆಗದೆರು. ನಿಮ್ಮ ಇಂಜಿನಿಯರ್​ರನ್ನು ಸ್ಥಳಕ್ಕೆ ಕರೆಸುವಂತೆ ವಾಹನದಲ್ಲಿದ್ದ ಶಶಿಧರ ಎಂಬುವವರಿಗೆ ಒತ್ತಾಯಿಸಿದರು. ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ವಾಹನಕ್ಕೆ ಬೆಂಕಿ ಹಚ್ಚುವುದಾಗಿ ರೈತರು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net