ಶಿರಾಡಿಯಲ್ಲಿ ಮತ್ತೆ ಕುಸಿದ ಗುಡ್ಡ

ಶಿರಾಡಿಯಲ್ಲಿ ಮತ್ತೆ ಕುಸಿದ ಗುಡ್ಡ
Published on

ಹಾಸನ: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ದೊಡ್ಡತಪ್ಪಲೆ ಗ್ರಾಮ ಸಮೀಪ ಮತ್ತೆ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟ್ಯಾಂಕರ್,ಲಾರಿ, ಎರಡು ಕಾರುಗಳು ಸೇರಿದಂತೆ ಆರು ವಾಹನಗಳು ಮಣ್ಣಿನಡಿ ಸಿಲುಕಿದವು. ವಾಹನದಲ್ಲಿದ್ದ ಎಲ್ಲರನ್ನು ರಕ್ಷಣೆ ಮಾಡಲಾಯಿತು. ಕಳೆದ ವಾರ ಸಹ ಇದೆ ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿ ಇಬ್ಬರು ಗಾಯಗೊಂಡಿದ್ದರು.
ಪಟ್ಟಣದ ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನಕ್ಕೆ ಪ್ರವಾಹದ ನೀರು ಅವರಿಸಿದೆ. ಈ ಮಧ್ಯೆ ದೇವಾಲಯದಲ್ಲಿ ನಾಗರಹಾವೊಂದು ಕಾಣಿಸಿಕೊಂಡಿದ್ದು ಅದನ್ನು ನೋಡಲು ಜನರ ನೂಕು ನುಗ್ಗಲು ಉಂಟಾಯಿತು. ತಾಲೂಕಿನ ಮಠಸಾಗರ- ಕೃಷ್ಣಪುರ ಸಂಪರ್ಕ ಸೇತುವೆಯ ಮೇಲೆ ಸುಮಾರು ಆರು ಅಡಿಯಷ್ಟು ನೀರು ಹರಿಯುತ್ತಿದ್ದು ಸಮೀಪದ ಅಡಿಕೆ ಹಾಗೂ ಕಾಫಿತೋಟ ಸಂಪೂರ್ಣ ಮುಚ್ಚಿಹೋಗಿದ್ದು ಕೊಟ್ಯಂತರ ರೂ. ನಷ್ಟ ಸಂಭವಿಸಿದೆ. ಸೇತುವೆ ಮುಳುಗಡೆಯಿಂದ ಕೃಷ್ಣಪುರ ಸೇರಿದಂತೆ ಮತ್ತೆರಡು ಗ್ರಾಮಗಳು ರಸ್ತೆ ಸಂಪರ್ಕವಿಲ್ಲದೆ ದ್ವೀಪಗಳಾಗಿವೆ. ಪಟ್ಟಣದಿಂದ ಹೆಬ್ಬಸಾಲೆ ಹಾಗೂ ಹೆನ್ನಲಿ ಗ್ರಾಮ ಸಂಪರ್ಕ ರಸ್ತೆ ಮತ್ತೆ ಮುಚ್ಚಿಹೋಗಿದೆ.
ಅರಕಲಗೂಡು ಹಾಗೂ ಬೇಲೂರಿನಲ್ಲಿ ಮಳೆ ಸುರಿಯುತ್ತಿದ್ದು, ಕೆರೆ-ಕಟ್ಟೆಗಳು ಕೋಡಿ ಬಿದ್ದು ಜಮೀನಿಗೆ ನೀರು ನುಗ್ಗಿ ಬೆಳೆ ನಷ್ಟವಾಗಿದೆ. ಜತೆಗೆ ಹಲವು ಮನೆಗಳ ಗೋಡೆಗಳು ಕುಸಿದುಬಿದ್ದಿವೆ. ಹಲವು ರಸ್ತೆಗಳು, ಸೇತುವೆಗಳ ಮೇಲೆ ನೀರು ಹರಿಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net