

ಹಾಸನ: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ಮಾರ್ಗದಲ್ಲಿ ಸಕಲೇಶಪುರ ತಾಲೂಕು ದೋಣಿಗಲ್ ಬಳಿ ಭೂ ಕುಸಿತ ಉಂಟಾಗಿ ವಾಹನಗಳ ಸಂಚಾರ ಬಂದ್ ಆಗಿದೆ. ಪರಿಹಾರ ಮಾರ್ಗವಾಗಿ ದೋಣಿಗಲ್ ಪಕ್ಕದಲ್ಲೇ ಹಳ್ಳಿಗಳ ಮೂಲಕ ಹಾದುಹೋಗಿರುವ ಪರ್ಯಾಯ ರಸ್ತೆಯನ್ನು 4.3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.
2.2 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಯನ್ನು 8 ಮೀಟರ್ ಅಗಲಕ್ಕೆ ವಿಸ್ತರಿಸಲು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಪರ್ಯಾಯ ರಸ್ತೆ ನಿರ್ಮಾಣದ ಬಗ್ಗೆ ಕೂಲಂಕಷ ಚರ್ಚೆ ನಡೆಯಿತು. ದೋಣಿಗಾಲ್ ಪಕ್ಕದಲ್ಲೇ ಇರುವ ಗ್ರಾಮೀಣ ರಸ್ತೆಯನ್ನು ಸುಮಾರು 8 ಮೀಟರ್ ಅಗಲೀಕರಣ ಮಾಡಲು ಲೋಕೋಪಯೋಗಿ ಇಲಾಖೆ ಸರ್ಕಾರದ ಅನುಮತಿ ಕೇಳಿದೆ. ಇದಕ್ಕೆ ಶೀಘ್ರ ಅನುಮತಿ ಸಿಗುವ ನಿರೀಕ್ಷೆಯಿದ್ದು, ಮುಂದಿನ ಎರಡು-ಮೂರು ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.
ಪರ್ಯಾಯ ರಸ್ತೆ ಕಾಮಗಾರಿ ಶೀಘ್ರ ಮುಗಿದು ಆ ಮಾರ್ಗದಲ್ಲಿ ವಾಹನಗಳ ಸಂಚಾರ ಆರಂಭವಾಗಲಿದೆ. ದೋಣಿಗಾಲ್ ಬಳಿ ವಾಹನಗಳ ಸಂಚಾರ ಇಲ್ಲದಿರುವ ಕಾರಣ ರಾಷ್ಟ್ರೀಯ ಹೆದ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಕಲೇಶಪುರದಿಂದ ಮಾರನಹಳ್ಳಿವರೆಗೂ ಚುತುಷ್ಪಥ ರಸ್ತೆ ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳಲು ತಿಳಿಸಲಾಗಿದೆ ಎಂದರು.
ಲಘು ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಿ ಜು. 17 ರಂದೇ ಆದೇಶ ಹೊರಡಿಸಲಾಗಿದೆ. ಶಿರಾಡಿ ಬದಲಾಗಿ ಚಾರ್ಮಾಡಿ ಹಾಗೂ ಸಂಪಾಜೆ ಮೂಲಕ ಸಂಚರಿಸಲು ಸೂಚಿಸಲಾಗಿದೆ. ಲಘು ವಾಹನಗಳಿಗೆ ಸಕಲೇಶಪುರದಿಂದ ಮಾರನಹಳ್ಳಿವರೆಗೆ ಪರ್ಯಾಯ ಗ್ರಾಮೀಣ ರಸ್ತೆಗಳಲ್ಲಿ ಸಾಗಿ ಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಗೆ ಕೂಡಿಕೊಳ್ಳಲು ತಿಳಿಸಲಾಗಿದೆ. ಇದಕ್ಕಾಗಿ ಎರಡು ಪರ್ಯಾಯ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಇದೆ. ಕೊಡಗು ಜಿಲ್ಲೆಯಲ್ಲಿ 16 ಟನ್‌ಗಿಂತ ಹೆಚ್ಚಿನ ತೂಕದ ವಾಹನಗಳ ಸಂಚಾರಕ್ಕೆ ನಿಷೇಧ ಇರುವುದರಿಂದ ಮಡಿಕೇರಿ ಮಾರ್ಗದಲ್ಲೂ ಸಂಚರಿಸಲು ಸಾಧ್ಯವಿಲ್ಲ. ಈ ನಿಷೇಧ ತೆರವುಗೊಳಿಸುವಂತೆ ಕೊಡಗು ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೆ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂದರು.
ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಪರ್ಯಾಯ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕುಸಿದಿರುವ ರಸ್ತೆಯನ್ನು ನಾಲ್ಕೈದು ದಿನಗಳಲ್ಲಿ ದುರಸ್ತಿಗೊಳಿಸಿದರೆ ದೋಣಿಗಲ್ ಮಾರ್ಗ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಹಾಲಿ ಇರುವ ಪರ್ಯಾಯ ರಸ್ತೆಯಲ್ಲಿ ಸಣ್ಣ ಸಣ್ಣ ವಾಹನಗಳು ಓಡಾಡುತ್ತಿವೆ. ಇತರೆ ವಾಹನಗಳೂ ಸಂಚರಿಸಲು 8 ಮೀಟರ್ ಅಗಲೀಕರಣ ಅಗತ್ಯವಿದೆ. ಇದಕ್ಕಾಗಿ ಅರಣ್ಯ ತೆರವು ಮಾಡಿ, ಆದಷ್ಟು ಶೀಘ್ರ ರಸ್ತೆ ಅಗಲೀಕರಣ ಮಾಡಲು ಸಚಿವರು ತಾಕೀತು ಮಾಡಿದ್ದಾರೆ. ಅದಾದ ಬಳಿಕ ವಾಹನ ಸಂಚಾರ ವ್ಯವಸ್ಥೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸಹ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಮತ್ತೆ ಭೂ ಕುಸಿತ ಸಂಭವಿಸುವ ಅಪಾಯ ಇದೆ. ಈ ಹಿನ್ನೆಲೆ ಪರ್ಯಾಯ ಮಾರ್ಗ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.