

ಶಿರಾ: ಕೋರಂ ಇಲ್ಲದೆ ಸಾಮಾನ್ಯ ಸಭೆ ನಡೆಸುವಂತಿಲ್ಲ, ಈ ಸಭೆಗೆ ಕನಿಷ್ಠ ಹಾಜರಾತಿ ಇದೆಯಾ? ಎಂದು ನಗರಸಭೆ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಪೂಜಾ ಪೆದ್ದರಾಜು ಬುಧವಾರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಜಿಶಾನ್ ಮೊಹಮ್ಮದ್ ಅವರ
ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಆಯುಕ್ತ ಕೆ.ರುದ್ರೇಶ್, ಒಟ್ಟು 35 ಹಾಜರಾತಿಯಲ್ಲಿ ಮೂರನೇ ಒಂದು ಭಾಗ ಅಂದರೆ 12 ಸದಸ್ಯರು ಸಭೆಗೆ ಹಾಜರಾಗಿದ್ದಾರೆ. ಸಭೆಗೆ ಕೋರಂ ಇದೆ ಎಂದು ಸ್ಪಷ್ಟೀಕರಣ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯೆ ಪೂಜಾ ನಾಮ ನಿರ್ದೇಶನ ಸದಸ್ಯರನ್ನು ನೀವು ಗಣನೆಗೆ ತಗೊಂಡಿಲ್ಲ ಏಕೆ? ಎಂದು ಪ್ರಶ್ನಿಸಿದಾಗ, ನಗರಸಭೆ ನಿಯಮಾವಳಿ ಪ್ರಕಾರ ನಾಮನಿರ್ದೇಶಕ ಸದಸ್ಯರನ್ನು ಕೋರಂಗೆ ಗಣನೆಗೆ ತೆಗೆದುಕೊಳ್ಳುವಂತಿಲ್ಲ ಎಂದು ನಗರಸಭೆ ಆಯುಕ್ತರು ಉತ್ತರಿಸಿದರು. ಸರ್ಕಾರದಿಂದ ನೇಮಕವಾದ ನಾಮ ನಿರ್ದೇಶಕರ ಹಾಜರಾತಿಯನ್ನು ಗಣನೆಗೆ ತೆಗೆದುಕೊಳ್ಳಲೇಬೇಕು. ಗಣನೆಗೆ ತೆಗೆದುಕೊಳ್ಳದ, ಹಾಗೂ
ಕೋರಂ ಇಲ್ಲದ ಸಾಮಾನ್ಯ ಸಭೆಯ ಯಾವ ರ್ನಿಣಯವನ್ನು ನಾನು ಒಪ್ಪುವುದಿಲ್ಲ ಎಂದು ಸಭೆಯಿಂದ ಹೊರ ನಡೆದರು.
ಸಾಮಾನ್ಯ ಸಭೆಯಲ್ಲಿ ಒಟ್ಟು 30 ವಿಷಯಗಳು ಪ್ರಸ್ತಾವನೆಯಾದವು, ಅವುಗಳಲ್ಲಿ ಕನಕ ಪಾರ್ಕ್ ಪಕ್ಕದಲ್ಲಿ ರಸ್ತೆಗಾಗಿ ಜಾಗ ತೆರವುಗೊಳಿಸಿ ಸುಗಮ ಸಂಚಾರ ಅನುವು ಮಾಡಿಕೊಡುವ ವಿಚಾರ, ನಗರದಲ್ಲಿ ಗುರುಭವನ ನಿರ್ಮಿಸಲು ನಗರಸಭೆಯಿಂದ ಅನುದಾನ ಅನುದಾನ ಹಾಗೂ ವಾರ್ಡ್ ನಂಬರ್ 11, 21 ಹಾಗೂ 19 ರಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸುವ ಕಾಮಗಾರಿ ಬಗ್ಗೆ ಮುಂಜೂರಾತಿ ನೀಡುವ ವಿಷಯಗಳನ್ನು ಹೊರತುಪಡಿಸಿ ಎಲ್ಲ ವಿಷಯಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ನಗರಸಭೆ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಮಾನ್ಯ ಸಭೆ ಮುಗಿದು ದಾಖಲೆ ನಿರ್ಮಿಸಿದ ಘಟನೆ ಬುಧವಾರ ಜರುಗಿತು.
ನಾನು ಪೂರ್ಣಾವಧಿ ಅಧ್ಯಕ್ಷ:ಬಲ್ಲ ಮೂಲಗಳ ಪ್ರಕಾರ ಪ್ರಸ್ತುತ ಹೀಗಿರುವ ಅಧ್ಯಕ್ಷ ಜೀಶಾನ್ ಮಹಮ್ಮದ್ ಹಾಗೂ ಇನ್ನೋರ್ವ ಸದಸ್ಯನ ನಡುವೆ ಅಧಿಕಾರ ಒಪ್ಪಂದವಾಗಿತಂತೆ. ಅಧಿಕಾರದ ಅವಧಿ ಮುಗಿದರೂ ಇನ್ನು ಅಧಿಕಾರ ಹಸ್ತಾಂತರ ಮಾಡಿಲ್ಲ ಎಂಬ ವಿಷಯ ಚರ್ಚೆಯಲ್ಲಿದ್ದು, ಆ ವಿಷಯ ಗೋಸ್ಕರವೇ ಸಾಮಾನ್ಯ ಸಭೆಯಲ್ಲಿ ಹೈಡ್ರಾಮಾ ನಡೆದು ಕಾಂಗ್ರೆಸ್ ಸದಸ್ಯರು ಗೈರಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷ ಯಾವ ಅಧಿಕಾರ ಒಪ್ಪಂದವೂ ಆಗಿಲ್ಲ, ಪೂರ್ಣಾವಧಿಗೂ ನಾನೇ ಅಧಿಕಾರದಲ್ಲಿ ಇರುತ್ತೇನೆಂದು ತಿಳಿಸಿರುತ್ತಾರೆ.ಕರ್ನಾಟಕ ಮುನ್ಸಿಪಲ್ ಆಕ್ಟ್ 1964ರ ನಡಾವಳಿ ಪ್ರಕಾರ ನಾಮನಿರ್ದೇಶಕ ಸದಸ್ಯರು ಮುನಿಸಿಪಲ್ ಕೌನ್ಸಿಲ್ ಸಭೆಯಲ್ಲಿ ಮತ ನೀಡುವ ಹಕ್ಕು ಇಲ್ಲ. ಆದುದರಿಂದ ಅವರನ್ನು ಕೋರಂ ಸಂಖ್ಯೆಗೆ ಗಣನೆಗೆ ತೆಗೆದುಕೊಳ್ಳುವುದಿಲ್ಲ.| ಕೆ.ರುದ್ರೇಶ್ ಆಯುಕ್ತ ನಗರಸಭೆ