

ಶಿವಮೊಗ್ಗ: ದೇಶಾದ್ಯಾಂತ ಲಾಕ್ಡೌನ್ ಹಿನ್ನೆಲೆಯಲ್ಲಿ ಹಾಲಿನ ಮಾರುಕಟ್ಟೆ ಕಡಿಮೆಯಾಗಿ ಪರಿವರ್ತನೆಗೂ ಅವಕಾಶ ಇಲ್ಲದ ಕಾರಣ ಶಿವಮೊಗ್ಗ ಹಾಲು ಒಕ್ಕೂಟ ಭಾನುವಾರ ಸಂಜೆಯ ಸರದಿ ಹಾಲು ಸಂಗ್ರಹ ಸ್ಥಗಿತ ಮಾಡಿದ್ದು, ಸೋಮವಾರ ಬೆಳಗ್ಗೆ ಕೂಡಾ ಹಾಲು ಶೇಖರಣೆ ಮಾಡದಿರಲು ನಿರ್ಧರಿಸಿದೆ.
ಒಕ್ಕೂಟಕ್ಕೆ ಪ್ರತಿನಿತ್ಯ 5.20 ಲಕ್ಷ ಲೀ. ಹಾಲಿನ ಶೇಖರಣೆ ಆಗುತ್ತಿದ್ದು, ಪ್ರಸ್ತುತ 6.50 ಲಕ್ಷ ಲೀ. ಹಾಲಿನ ದಾಸ್ತಾನು ಇದೆ. ಅಲ್ಲದೆ, ತೆಲಂಗಾಣ, ಬೆಂಗಳೂರಿನ ಇಂಟರ್ ಡೈರಿ, ರಾಮನಗರ ಮತ್ತು ಚನ್ನಪಟ್ಟಣಕ್ಕೆ ಪೌಡರ್ಗೆ ಹೋಗುತ್ತಿದ್ದ ಹಾಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಅನಿವಾರ್ಯ ಪರಿಸ್ಥಿತಿ ನಿಯಂತ್ರಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಲೋಹಿತೇಶ್ವರ್ ತಿಳಿಸಿದ್ದಾರೆ.
ಹಾಲಿನ ಶೇಖರಣೆ, ಸಂಸ್ಕರಣೆ, ಮಾರುಕಟ್ಟೆಗೆ ಸಂಬಂಧಿಸಿ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಲಾಕ್ಡೌನ್ ಮುಂದುವರಿದಲ್ಲಿ ಪರಿಸ್ಥಿತಿ ಅವಲೋಕಿಸಿ ಕಾಲಕ್ಕೆ ತಕ್ಕಂತೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಇದಕ್ಕೆ ಸಮಸ್ತ ಹಾಲು ಉತ್ಪಾದಕರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಕಾರ ಅಗತ್ಯ ಎಂದು ತಿಳಿಸಿದ್ದಾರೆ.