

ಔರಾದ್: ಎಕಲಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇತರ ಶಾಲೆಗಳಿಗೆ ಮಾದರಿ ಆಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಿರಿಯ ಉಪನ್ಯಾಸಕ ಲಕ್ಷö್ಮಣ ತುರೆ ನುಡಿದರು.
ಎಕಲಾರ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ದಸರಾ ರಜೆ ಸದ್ಬಳಕೆ ಹಿನ್ನೆಲೆ ಆಯೋಜಿಸಿದ್ದ ವೈಜ್ಞಾನಿಕ ಚಿಂತನೆ ಮತ್ತು ಅಧ್ಯಯನ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಆಯೋಜಿಸಿ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಗುರುನಾಥ ತವಾಡೆ ಮಾತನಾಡಿ, ಪ್ರಾಥಮಿಕ ಶಾಲಾ ಹಂತದಲ್ಲಿ ಗುಣಾತ್ಮಕ ಶಿಕ್ಷಣ ದೊರೆತರೆ ಪ್ರೌಢ ಶಾಲೆ ಮತ್ತು ಕಾಲೇಜುಗಳಲ್ಲಿ ಸಾಧನೆ ತೋರಲು ಸರಳವಾಗಲಿದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೋಡಲ್ ಅಧಿಕಾರಿ ಸಂಗೀತಾ, ಚಿಮಕೋಡ್ ಸರ್ಕಾರಿ ಶಾಲೆ ಸಂಪನ್ಮೂಲ ಶಿಕ್ಷಕ ಶಾಲಿವಾನ ಸಿದಬಟ್ಟೆ, ಸುರೇಶ ಪಾಂಡ್ರೆ, ಧನರಾಜ ಮಾನೆ, ಅಶೋಕ ಹೊಂಡಾಳೆ, ಶಿವಾನಂದ ಬಿರಾದಾರ, ಮಹಾದೇವ ಘುಳೆ, ಪ್ರಭು ಬಾಳೂರೆ, ಶಿಬಿರದ ಸಂಯೋಜಕ ಶಿಕ್ಷಕ ಬಾಲಾಜಿ ಅಮರವಾಡಿ, ಅಂಕುಶ ಪಾಟೀಲ್, ಸಿದ್ದೇಶ್ವರಿ, ರೂಪಾ ಇತರರಿದ್ದರು.
ನ್ಯಾಯಾಧೀಶರ ಭೇಟಿ: ದಸರಾ ರಜೆಯಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಎಕಲಾರ ಶಾಲೆಯಲ್ಲಿ ನಡೆಸುತ್ತಿರುವ ಶಿಬಿರಕ್ಕೆ ಔರಾದ್ ಹಿರಿಯ ಸಿವಿಲ್ ನ್ಯಾಯಾಧೀಶ ರವಿಬಾಬು ಚವ್ಹಾಣ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಜ್ಞಾನೇಶ್ವರ ಮಾಳಗೆ ಭೇಟಿ ನೀಡಿ, ಶಾಲೆ ಅಭಿವೃದ್ಧಿಪರ ಮತ್ತು ಕಲಿಕಾ ಪೂರಕ ವಿನೂತನ ಯೋಜನೆಗಳ ಮಾಹಿತಿ ಪಡೆದರು. ಮಕ್ಕಳೊಂದಿಗೆ ಮಾತನಾಡಿ, ಪರಿಶ್ರಮದಿಂದ ಅಧ್ಯಯನದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.